ಬೆಂಗಳೂರು: ಸಾರಿಗೆ ನೌಕರರಿಗೆ ಕಡಿಮೆ ವೇತನ ನೀಡಲಾಗುತ್ತಿರುವುದರಿಂದ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ. ಜತೆಗೆ ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು 5 ಮಂದಿ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಸೋಮವಾರ ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಮುಷ್ಕರ ಸಮಯದಲ್ಲಿ ವಜಾಗೊಂಡ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಆಡಳಿತ ಮಂಡಳಿ ಕೆಲ ಅಧಿಕಾರಿಗಳು ದ್ವೇಷ ಸಾಧಿಸುತ್ತಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ತರುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ಘಟಕಗಳ ಪ್ರತಿಯೊಂದು ಹಂತದ ಭ್ರಷ್ಟಚಾರದಿಂದ ನೌಕರರು ಮಾನಸಿಕ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳಲ್ಲಿ ಚಾಲ್ತಿಯಲ್ಲಿರುವ 4 ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ಚೌಕಾಸಿ, ವೇತನ ಪರಿಷ್ಕರಣಾ ಪದ್ಧತಿ ಕೈಬಿಟ್ಟು, ಸರ್ಕಾರ ಇಲಾಖೆ ಮತ್ತು ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಿಕೊಂಡು ಸಾರಿಗೆ ನೌಕರರಿಗೂ ಸರ್ಕಾರಿ ನೌಕರರಂತೆ ಸಮಾನ ವೇತನ ನೀಡಬೇಕು.
1992 ರಿಂದ ಇದುವರೆಗೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಸಾರಿಗೆ ನಿಗಮಗಳಲ್ಲಿ ಕೂಡಲೇ ಕಾರ್ಮಿಕ ಸಂಘಗಳ ಚುನಾವಣೆ ನಡೆಸುವಂತೆ ಒತ್ತಾಯಿಸಿದರು.
ಪರೋಕ್ಷವಾಗಿ ಸಾರಿಗೆ ಸಂಸ್ಥೆಯ ಖಾಸಗೀಕರಣ: ಸಾರಿಗೆ ಸಂಸ್ಥೆಗಳಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರು, ನಿರ್ವಾಹಕರು ಹಾಗೂ ಇತರ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲಕರನ್ನು ನೇಮಕ ಮಾಡುವ ಮೂಲಕ ಪರೋಕ್ಷವಾಗಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣ ಮಾಡುವ ಯೋಜನೆಯನ್ನು ಕೂಡಲೇ ಕೈ ಬಿಡಬೇಕು.
ಈ ನಿಟ್ಟಿನಲ್ಲಿ ಮೊದಲಿಗೆ ಸಾರ್ವಜನಿಕರ ಹಾಗೂ ಸರ್ಕಾರದ ಗಮನಕ್ಕೆ ಸೆಳೆಯಲು ಭಿತ್ತಿ ಪತ್ರ ಹಂಚುವ ಚಳವಳಿ ಹಮ್ಮಿಕೊಳ್ಳಲಾಗುತ್ತದೆ. ಈ ವೇಳೆಯೂ ಬೇಡಿಕೆ ಈಡೇರದೇ ಇದ್ದರೆ ಮುಂದಿನ ಅವಧಿಯಲ್ಲಿ ಅನಿರ್ದಿಷ್ಟಾವಧಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಓದಿ: ದೇವೇಗೌಡರನ್ನು ಭೇಟಿಯಾದ ಸಿದ್ದರಾಮಯ್ಯ: ವಿವಿಧ ವಿಚಾರಗಳ ಮೇಲೆ ಚರ್ಚೆ