ಬೆಂಗಳೂರು: ಜಮೀನು ವಿಚಾರವಾಗಿ ಮಾತನಾಡುವ ನೆಪದಲ್ಲಿ ಕರೆಸಿಕೊಂಡು ಮಹಿಳೆ ಸೇರಿ ಇಬ್ಬರನ್ನು ಅಪಹರಿಸಿ 11 ಲಕ್ಷ ರೂ. ಸುಲಿಗೆ ಮಾಡಿದ್ದ ಐವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ಮೂಲದ ಪ್ರಸಾದ್, ಸತ್ಯನಾರಾಯಣ, ಮಹಾರಾಷ್ಟ್ರ ಮೂಲದ ಶ್ರೀಧರ್, ಕಿರಣ್ ಮೋರೆ ಹಾಗೂ ನಾಗೋರಾವ್ ಬಂಧಿತರು. ಪ್ರಮುಖ ಆರೋಪಿ ಹರೀಶ್ ಹಾಗೂ ವರ್ಮ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ.
ಆಗಸ್ಟ್ 16 ರಂದು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಹೋಟೆಲ್ ಬಳಿಯಿಂದ ಕೆ.ಆರ್.ಪುರದ ವಿನಾಯಕ ಲೇಔಟ್ ನಿವಾಸಿಗಳಾದ ವಸಂತಾ ಮತ್ತು ಆಕೆಯ ಸೋದರ ಸಂಬಂಧಿ ಶಿವಾರೆಡ್ಡಿ ಎಂಬುವವರನ್ನು ಆರೋಪಿಗಳು ಅಪಹರಿಸಿದ್ದರು. ಬಳಿಕ ಹೆದರಿಸಿ 11 ಲಕ್ಷ ರೂ. ಹಣ ಸುಲಿದು ಜೀವ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದರು.
ಸಮಾಜ ಸೇವಕಿಯಾಗಿರುವ ವಸಂತಾ ಹಾಗೂ ಆಕೆಯ ಸೋದರ ಸಂಬಂಧಿ ಶಿವಾರೆಡ್ಡಿ ನಿವೇಶನ ಹಾಗೂ ಜಮೀನು ಮಾರಾಟ ಮಾಡಿಸುವ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುತ್ತಿದ್ದರು. ಆ.16ರಂದು ಸಂಜೆ 6 ಗಂಟೆ ವಸಂತಾ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿರುವ ಆರೋಪಿ ಹರೀಶ್ ಬೆಂಗಳೂರಿಗೆ ಬಂದಿರುವುದಾಗಿ ಹೇಳಿದ್ದಾನೆ. ಜಮೀನು ವಿಚಾರವಾಗಿ ಮಾತನಾಡಬೇಕು ಎಂದು ಇಬ್ಬರನ್ನೂ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿಯ ಎಟುಬಿ ಹೋಟೆಲ್ ಬಳಿಗೆ ಕರೆಸಿಕೊಂಡಿದ್ದಾನೆ.
ವಂಸಂತಾ ಮತ್ತು ಶಿವಾರೆಡ್ಡಿ ಹೋಟೆಲ್‌ಗೆ ಬಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ಆರೋಪಿ ಹರೀಶ್, ಸತ್ಯನಾರಾಯಣ, ಪ್ರಸಾದ್ ಹಾಗೂ ಇತರೆ ಮೂವರು ಹೋಟೆಲ್‌ನಲ್ಲಿ ಮಾತನಾಡುವುದು ಬೇಡ, ಬೇರೆ ಕಡೆ ಮಾತನಾಡೋಣ ಎಂದು ವಸಂತಾ ಮತ್ತು ಶಿವಾರೆಡ್ಡಿಯನ್ನು ಕಾರಿನಲ್ಲಿ ಕೂರಿಸಿಕೊಂಡು ದೇವನಹಳ್ಳಿ ಕಡೆಗೆ ತೆರಳಿದ್ದಾರೆ. ಈ ವೇಳೆ ಅನುಮಾನಗೊಂಡು ವಸಂತಾ ‘ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಾ?’ ಎಂದು ಪ್ರಶ್ನಿಸಿದ್ದಾರೆ. ಆರೋಪಿಗಳು ವಸಂತಾ ಹಾಗೂ ಶಿವಾರೆಡ್ಡಿಯ ಮೊಬೈಲ್ ಕಿತ್ತುಕೊಂಡು ಸುಮ್ಮನೆ ಕೂರುವಂತೆ ಹೆದರಿಸಿದ್ದಾರೆ. ನಂತರ ಹೈದರಾಬಾದ್‌ನ ಟ್ರಿಡೆಂಟ್ ಜಿಮ್‌ನ ಹೋಟೆಲ್‌ನ 11ನೇ ಮಹಡಿಯಲ್ಲಿರುವ ರೂಮ್‌ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾರೆ. ಬಳಿಕ ಶಿವಾರೆಡ್ಡಿಯನ್ನು ಒತ್ತೆಯಾಳಾಗಿರಿಸಿಕೊಂಡು ವಸಂತಾ ಅವರನ್ನು ಹಣ ತರುವಂತೆ ಬೆಂಗಳೂರಿಗೆ ಕಳುಹಿಸಿದ್ದಾರೆ. ಇದಕ್ಕೂ ಮುನ್ನ ಈ ವಿಚಾರವನ್ನು ಪೊಲೀಸರು ಅಥವಾ ಬೇರೆ ಯಾರಿಗಾದರೂ ಹೇಳಿದರೆ ಶಿವಾರೆಡ್ಡಿಯನ್ನು ಸಾಯಿಸುವುದಾಗಿ ವಸಂತಾಳಿಗೆ ಬೆದರಿಕೆ ಹಾಕಿ ಕಳುಹಿಸಿದ್ದಾರೆ.
ಕಿಡ್ನ್ಯಾಪರ್ಸ್ನಿಂದ ಪ್ರಾಣ ಬೆದರಿಕೆ: ಆ.18ರಂದು ಬೆಂಗಳೂರಿಗೆ ಬಂದ ವಸಂತಾ, ಸ್ನೇಹಿತರಿಂದ 1.50 ಲಕ್ಷ ಸಾಲ ಪಡೆದು ಬಳಿಕ ತನ್ನ ಬಳಿಯಿದ್ದ ಚಿನ್ನಾಭರಣಗಳನ್ನು ಖಾಸಗಿ ಫೈನಾನ್ಸ್‌ನಲ್ಲಿ ಗಿರವಿ ಇಟ್ಟು 9.50 ಲಕ್ಷ ರೂ. ಹಣ ಪಡೆದು ಒಟ್ಟು 11 ಲಕ್ಷ ರೂಪಾಯಿ ಹೊಂದಿಸಿದ್ದಾರೆ. ಆದರೂ ಆರೋಪಿಗಳು ‘ಇಷ್ಟು ಹಣ ಸಾಲುವುದಿಲ್ಲ. 25 ಲಕ್ಷ ಹಣವನ್ನಾದರೂ ತರಬೇಕು ಎಂದು ವಸಂತಾಗೆ ಹೇಳಿದ್ದಾರೆ. ನನ್ನ ಬಳಿ ಇಷ್ಟೇ ಹಣ ಇರುವುದೆಂದು ವಸಂತಾ ಹೇಳಿದಾಗ, ಆ ಹಣವನ್ನೇ ತೆಗೆದುಕೊಂಡು ಬಾ ಎಂದು ಆರೋಪಿಗಳು ಹೇಳಿದ್ದಾರೆ. ಅದರಂತೆ ವಸಂತಾ ಹೈದರಾಬಾದ್‌ನ ಖಾಸಗಿ ಹೋಟೆಲ್‌ಗೆ ತೆರಳಿ ಹಣ ನೀಡಿದ್ದಾರೆ. ಬಳಿಕ ಆರೋಪಿಗಳು ಶಿವಾರೆಡ್ಡಿಯನ್ನು ಬಿಡುಗಡೆ ಮಾಡಿದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ, ನೀವು ಮತ್ತು ನಿಮ್ಮ ಕುಟುಂಬದವರ ಪ್ರಾಣ ತೆಗೆಯುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ವಸಂತಾ ತಿಳಿಸಿದ್ದಾರೆ.
ಅಪಹರಣಕಾರರಿಂದ ಬಿಡಿಸಿಕೊಂಡು ಬೆಂಗಳೂರಿಗೆ ಬಂದ ವಸಂತಾ, ನಡೆದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಭಟ್ಕಳ ಬಾಲಕನ ಕಿಡ್ನ್ಯಾಪ್ ಪ್ರಕರಣ.. ಹಣ ವಾಪಸ್ ಪಡೆಯಲು ಅಜ್ಜನಿಂದಲೇ ಮೊಮ್ಮಗನ ಅಪಹರಣ