ಬೆಂಗಳೂರು: ತ್ರಿಪುರಾದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಸಿಲಿಕಾನ್ ಸಿಟಿಗೆ ತಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಮೂವರು ಪೆಡ್ಲರ್‌ಗಳನ್ನು ಬಾಣಸವಾಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಖಮರುಲ್ಲಾ ಇಸ್ಲಾಂ (27), ಸಾಹೀಬ್ ಮಿಯಾ (40) ಮತ್ತು ಖುರ್ಷಿದ್ ಮಿಯಾ (21) ಬಂಧಿತರು. ಈ ಮೂವರು ತ್ರಿಪುರಾದ ಮಧುಪುರ ಎಂಬಲ್ಲಿ ಹಾಗೂ ವಿವಿಧೆಡೆಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ರೈಲಿನ ಮೂಲಕ ಬೆಂಗಳೂರಿಗೆ ತರುತ್ತಿದ್ದರು. ಬಳಿಕ ನಗರದ ವಿವಿಧೆಡೆ ಅಕ್ರಮವಾಗಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ.ಭೀಮಾ ಶಂಕರ್ ಗುಳೇದ್ ತಿಳಿಸಿದ್ದಾರೆ.
ನಗರದ ಜಾನಕಿ ರಾಮ ಲೇಔಟ್ ಆಟೋ ನಿಲ್ದಾಣದ ಹತ್ತಿರ ರೈಲ್ವೆ ನಿಲ್ದಾಣದ ಕಡೆಗೆ ಹೋಗುವ ರಸ್ತೆಯಲ್ಲಿ ಈ ಮೂವರು ಗಾಂಜಾವನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮಾರಲು ಯತ್ನಿಸುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬಾಣಸವಾಡಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 6 ಲಕ್ಷ ರೂ.ಮೌಲ್ಯದ 20 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಒಡಿಶಾ ಇಬ್ಬರು ಪೆಡ್ಲರ್‌ಗಳ ಬಂಧನ: ಒಡಿಶಾದಿಂದ ಮಾದಕ ವಸ್ತುವನ್ನು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ರಾಮಮೂರ್ತಿನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆಸಿಫ್ ಶೇಖ್ (30) ಮತ್ತು ಶಿವರಾಜ್ (26) ಬಂಧಿತ ಆರೋಪಿಗಳು.
ಇವರಿಬ್ಬರು ಒಡಿಶಾದಿಂದ 10 ಸಾವಿರ ರೂ.ಗೆ ಒಂದು ಕೆ.ಜಿ ಗಾಂಜಾ ಖರೀದಿಸಿ ಬೆಂಗಳೂರಿಗೆ ಬರುತ್ತಿದ್ದರು. ಇಲ್ಲಿ 1 ಕೆ.ಜಿ ಗಾಂಜಾವನ್ನು 25 ಸಾವಿರ ರೂ.ಗೆ ನಗರದ ವಿವಿಧ ಸ್ಥಳಗಳಲ್ಲಿ ಮತ್ತು ರಾಮಮೂರ್ತಿನಗರ ವ್ಯಾಪ್ತಿಗಳಲ್ಲಿ ಚಿಕ್ಕ ಚಿಕ್ಕ ಕವರ್‌ಗಳಿಗೆ ಹಾಕಿ ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡುತ್ತಿದ್ದರು ಎಂಬ ಸಂಗತಿ ವಿಚಾರಣೆಯಿಂದ ತಿಳಿದು ಬಂದಿದೆ. ಸದ್ಯ ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ 15 ಕೆ.ಜಿ ಗಾಂಜಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆಸ್ತಿ ವಿವಾದ : ಮೈಸೂರಿನಲ್ಲಿ ತಂದೆಯನ್ನೇ ಶೂಟ್ ಮಾಡಿದ ಮಗ