ಬೆಂಗಳೂರು: ವಿಧಾನಸಭೆಯ ಅಧಿವೇಶನ ಪ್ರಾರಂಭವಾಗಿ ಮೂರು ದಿನವಾದರೂ ಬಿಜೆಪಿಯವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ಸದನದಲ್ಲಿ ಆರ್. ಅಶೋಕ್ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಲು ಮುಂದಾದಾಗ ಮಧ್ಯಪ್ರವೇಶಿಸಿದ ಸಿಎಂ, ಮೂರು ದಿನವಾದರೂ ನಿಮಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಬುರುಡೆ ಹೊಡೆಯುತ್ತಿದ್ದೀರಿ ಎಂದು ವ್ಯಂಗ್ಯವಾಡಿದರು.
ಪದೇ ಪದೇ ಎದ್ದು ನಿಂತು ಮಾತನಾಡಿದರೆ, ರಭಸವಾಗಿ ಮಾತನಾಡಿದರೆ ವಿರೋಧ ಪಕ್ಷದ ನಾಯಕನನ್ನಾಗಿ ಮಾಡುತ್ತಾರೆಯೇ ಎಂದು ಯತ್ನಾಳ್ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ತಾಳ್ಮೆ ಇರಲಿ ಸಭಾಧ್ಯಕ್ಷರು ಅವಕಾಶ ಕೊಟ್ಟಿಲ್ಲ. ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪಕ್ಕೆ ಮಾತ್ರ ಅವಕಾಶ ನೀಡಿದ್ದಾರೆ ಎಂದು ವಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಹೆಣ್ಣುಮಕ್ಕಳಿಗೆ ಅವಕಾಶ ಮಾಡಿಕೊಟ್ಟಿರುವುದನ್ನು ಬಿಜೆಪಿಯವರು ವಿರೋಧ ಮಾಡಿದಂತಿದೆ. ಉತ್ತರ ಕೊಡದೆ ಓಡಿಹೋದವರು, ಜನರು ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ಎಲ್ಲರೂ ಎದ್ದುನಿಂತು ಮಾತನಾಡಿದರೂ ನಾವು ಹೆದರುವುದಿಲ್ಲ. ಜನ ಈ ರೀತಿಯ ತೀರ್ಪು ಕೊಟ್ಟರೂ ನಿಮಗೆ ಬುದ್ಧಿ ಬಂದಿಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.
ಹೆಣ್ಣು ಮಕ್ಕಳ ಉಚಿತ ಪ್ರಯಾಣದ ಪರವೋ ವಿರುದ್ಧವೋ ಎಂಬುದನ್ನು ಬಿಜೆಪಿಯವರು ಹೇಳಲಿ, ನಾವು ಚರ್ಚೆಗೆ ಉತ್ತರ ಕೊಡಲು ತಯಾರಿದ್ದೇವೆ. 2018ರಲ್ಲಿ ಆಶ್ವಾಸನೆ ಕೊಟ್ಟು ಓಡಿಹೋದವರು ನಿಮ್ಮ ಪ್ರಣಾಳಿಕೆಯಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿ ಎಂದು ಕುಟುಕಿದರು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ನಮ್ಮ ಪಕ್ಷ ಐದು ಭರವಸೆಗಳನ್ನು ನೀಡಿತ್ತು. ಅದರಲ್ಲಿ ನಮ್ಮ ಸರ್ಕಾರ ಮೂರು ಗ್ಯಾರಂಟಿಗಳನ್ನು ಈಡೇರಿಸಿದೆ. ನಾಲ್ಕನೇ ಗ್ಯಾರಂಟಿ ಈಡೇರಿಸುವ ಸಿದ್ಧತೆಯಲ್ಲಿದ್ದೇವೆ. 6 ತಿಂಗಳ ಬಳಿಕ 5 ನೇ ಗ್ಯಾರಂಟಿಯು ಅನುಷ್ಠಾನವಾಗಲಿದೆ. ಯಾರು ಏನೇ ಹೇಳಿದರೂ ಶೇ.100ಕ್ಕೆ ನೂರರಷ್ಟು 5 ಗ್ಯಾರಂಟಿಯನ್ನು ಇದೇ ಆರ್ಥಿಕ ವರ್ಷದಲ್ಲಿ ಈಡೇರಿಸುತ್ತೇವೆ ಎಂದು ಸದನಕ್ಕೆ ಭರವಸೆ ನೀಡಿದರು.
ಬಿಜೆಪಿಯವರು ಬಸ್ಸು ಬಿಡಲಿಲ್ಲ ಅಂತಾನೆ ಈಗ ನೀವು ಬಸ್ ಬಿಡಿ ಅಂತಿರೋದು: ವಿಧಾನಸಭೆ ಚುನಾವಣಾ ಪೂರ್ವದಲ್ಲಿ ಬಣ್ಣ ಬಣ್ಣದ ಜಾಹೀರಾತು ನೀಡಿ ಮತ ಹಾಕಿಸಿಕೊಂಡವರು ಐದು ಗ್ಯಾರಂಟಿಗಳ ಜೊತೆಗೆ ಇನ್ನೂ 5 ಗ್ಯಾರಂಟಿಯನ್ನು ನೀಡಲಿ. ನಾವು ಬೇಡ ಎನ್ನುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯಲ್ಲಿಂದು ಬಿಜೆಪಿಯ ಹಿರಿಯ ಸದಸ್ಯ, ಮಾಜಿ ಸಚಿವ ಆರ್.ಅಶೋಕ್ ಅವರು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಗ್ಯಾರಂಟಿ ವಿಚಾರವಿರುವ ಪತ್ರಿಕೆಯೊಂದನ್ನು ಸದನದಲ್ಲಿ ಪ್ರಸ್ತಾಪಿಸಿದಾಗ, ಮಧ್ಯಪ್ರವೇಶಿಸಿ ಕುಮಾರಸ್ವಾಮಿ ಮಾತನಾಡಿದರು.
ಬಿಜೆಪಿಯವರು ಬಸ್ಸು ಬಿಡಲಿಲ್ಲ ಅಂತಾನೆ ಈಗ ನೀವು (ಕಾಂಗ್ರೆಸ್) ಬಸ್ ಬಿಡಿ ಅಂತಿರೋದು. 55 ಲಕ್ಷ ಮಹಿಳೆಯರು ಸಾರಿಗೆ ಸಂಸ್ಥೆಗಳ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾರೆ. ಬಹಳಷ್ಟು ಮಹಿಳೆಯರು ಧರ್ಮಸ್ಥಳಕ್ಕೆ ಹೋಗುತ್ತಿರುವುದರಿಂದ ಅಲ್ಲಿ ಊಟ ನಿಲ್ಲಿಸಿದ್ದಾರೆ ಎಂಬುದು ಚರ್ಚೆಯಾಗುತ್ತಿದೆ ಎಂದಾಗ, ಕೆಲ ಸದಸ್ಯರು ಊಟ ನಿಲ್ಲಿಸಿಲ್ಲ ಎಂದರು.
ಇದನ್ನೂ ಓದಿ: ಸರ್ಕಾರ ತಕ್ಷಣ ರಾಜ್ಯದಲ್ಲಿ ಬರಗಾಲ ಎಂದು ಘೋಷಣೆ ಮಾಡಬೇಕು: ಬಿ.ಎಸ್ ಯಡಿಯೂರಪ್ಪ ಆಗ್ರಹ