ಬೆಂಗಳೂರು: ವಿಧಾನ ಪರಿಷತ್ನಲ್ಲಿ ಇಂದು ಐದು ವಿಧೇಯಕಗಳ ಮಂಡನೆ ಮಾಡಿ ಅಂಗೀಕಾರ ಪಡೆಯಲಾಯಿತು.
ವಿಧಾನ ಪರಿಷತ್ ಕಲಾಪದ ಮಧ್ಯಾಹ್ನದ ವಿರಾಮದ ನಂತರ ತಿದ್ದುಪಡಿ ವಿಧೇಯಕ ಮಂಡಿಸಲಾಯಿತು. ಸಚಿವ ಹಾಗೂ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ನ್ಯೂ ಹೊರೈಜನ್ ವಿಶ್ವವಿದ್ಯಾಲಯ ವಿಧೇಯಕ 2021, ಬಿ.ಆರ್.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ 2021, ವಿದ್ಯಾ ಶಿಲ್ಫ್ ವಿಶ್ವವಿದ್ಯಾಲಯ ವಿಧೇಯಕ 2020, ಏಟ್ರಿಯಾ ವಿಶ್ವವಿದ್ಯಾಲಯ ವಿಧೇಯಕ 2020, ಮರುಘರಾಜೇಂದ್ರ ವಿಶ್ವವಿದ್ಯಾಲಯ ವಿಧೇಯಕ 2021ಗಳಿಗೆ ಸಮ್ಮತಿಸುವಂತೆ ಕೋರಿದರು.
ಈ ಬಗ್ಗೆ ವಿವರಣೆ ನೀಡಿದ ಅಶ್ವತ್ಥ್ ನಾರಾಯಣ್, ಐದು ವಿಶ್ವವಿದ್ಯಾಲಯ ಕುರಿತ ವಿಧೇಯಕಗಳ ಮೇಲೆ ಒಂದೇ ಚರ್ಚೆ ಆಗಲಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಪಕ್ಷಗಳು ಒಪ್ಪಿ ಸಮ್ಮತಿ ಸೂಚಿಸಿದವು. ಮೂರು ಕೋಟಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮುಂದಿನ ವರ್ಷಗಳಲ್ಲಿ ಮಕ್ಕಳ ಸಂಖ್ಯೆ 14 ಕೋಟಿಗೆ ಹೆಚ್ಚಲಿದೆ. ಇದರಿಂದ ಸರ್ಕಾರದಿಂದ ಮಾತ್ರ ನಿರ್ವಹಣೆ ಸಾಧ್ಯವಿಲ್ಲ. ಆದ್ದರಿಂದ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆ ಅತ್ಯಗತ್ಯ. ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ವಿಧೇಯಕ ಚರ್ಚೆ: ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸ್ಯಾಮ್ ಪಿತ್ರೊಡಾ ಅವರು ರಾಜ್ಯಕ್ಕೆ 15 ವಿಶ್ವವಿದ್ಯಾಲಯ ಇರಬೇಕೆಂದು ಹೇಳಿದ್ದರು. ಅಷ್ಟು ಸರ್ಕಾರದಿಂದ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಖಾಸಗಿಯವರಿಗೆ ನೀಡಲು ಮುಂದಾಗಿದ್ದೀರಿ. ಇಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಮುಕ್ತ ಸ್ವಾತಂತ್ರ್ಯ ನೀಡುವುದು ಸರಿಯಲ್ಲ ಎಂದರು.
ಶೈಕ್ಷಣಿಕ ಹಿಂದುಳಿದ ಉತ್ತರ ಕರ್ನಾಟಕ ಭಾಗದ ನಾವು ಖಾಸಗಿ ಶಿಕ್ಷಣ ಸಂಸ್ಥೆ ವಿರೋಧಿಸಲು ಸಾಧ್ಯವಿಲ್ಲ. ವಿವಿಧ ಮಠಾಧೀಶರು ಆರಂಭಿಸಿದ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುತ್ತಿವೆ. ವೀರಶೈವ ಸಮಾಜದವರು ಸ್ಥಾಪಿಸಿದ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಂದಾಗಿ ಬೆಳೆದಿದ್ದೇವೆ. ನಾವು ಹಿಂದುಳಿದಿದ್ದೇವೆ ಎಂದು ಹೇಳುವ ಶಕ್ತಿ ಪಡೆದಿದ್ದೇವೆ. ಅಲ್ಪ ಸ್ವಲ್ಪ ವಿದ್ಯೆ ಕಲಿತಿದ್ದರೆ ಖಾಸಗಿ ವಿದ್ಯಾ ಸಂಸ್ಥೆಗಳಿಂದಾಗಿ ಆಗಿದೆ. ನಾವು ಇಲ್ಲಿ ಇದ್ದೇವೆ ಎಂದರೆ ಅದಕ್ಕೆ ಶಿಕ್ಷಣ ನೀಡಿದ ಖಾಸಗಿ ವಿವಿ ಕಾರಣ. ಆದರೆ ಇಂದು ಇವರು ಹಿಡಿತ ಕಳೆದುಕೊಂಡಿದ್ದಾರೆ. ಇವರ ಮೇಲೆ ನಿಯಂತ್ರಣ ಬೇಕಿದೆ. ಎಲ್ಲವನ್ನೂ ಮುಕ್ತವಾಗಿ ಅವರಿಗೆ ಬಿಡಲು ಸಾಧ್ಯವಿಲ್ಲ ಎಂದರು.
ಇದೊಂದು ಮರಣ ಶಾಸನ: ಜೆಡಿಎಸ್ ಸದಸ್ಯರಾದ ಸಿ.ಎಂ.ಇಬ್ರಾಹಿಂ ಮಾತನಾಡಿ, ಇದೊಂದು ಮರಣ ಶಾಸನವಾಗಿದೆ. ಡೀಮ್ಡ್ ವಿವಿಗಳಿಗೆ ಯಾವುದೇ ಪ್ರಮಾಣಪತ್ರ ಅಗತ್ಯವಿಲ್ಲ. ಪ್ರಶ್ನಾತೀತರು ಅವರು. ಹಿಂದೆ ನಾವೆಲ್ಲಾ ಮಠಗಳಲ್ಲಿದ್ದು ಕಲಿತವರು. ಇಂದು ಇವರಿಂದ ಗುಣಮಟ್ಟದ ಶಿಕ್ಷಣ ಸಿಗಲ್ಲ. ದಯವಿಟ್ಟು ಇದನ್ನು ಸೆಲೆಕ್ಟ್ ಕಮಿಟಿಗೆ ವಹಿಸಿ, ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳಿ. ನೀವು ಡಾಕ್ಟರ್ಗಳಾಗಿ ಇಂತಹ ನಿರ್ಧಾರ ಕೈಗೊಳ್ಳಬೇಡಿ. ಸಾಕಷ್ಟು ಇಂಜಿನಿಯರಿಂಗ್ ಕಾಲೇಜುಗಳು ಮುಚ್ಚಿಕೊಂಡು ಹೋಗಿವೆ. ಹತ್ತು ವರ್ಷಗಳ ನಂತರ ಇಂತಹ ವಿವಿಗಳೂ ನಿಂತು ಹೋಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಖಾಸಗೀಕರಣದಿಂದ ಯಾವುದೇ ಉತ್ತಮ ಅಭಿವೃದ್ಧಿ ಅಸಾಧ್ಯ. ಡೊನೇಶನ್ ಕೊಟ್ಟು ಶಿಕ್ಷಣ ಪಡೆಯುವುದು ಎಷ್ಟು ಸರಿ? ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಕೊಡಬೇಕೆಂದು ಹೇಳಲಾಗಿತ್ತು. ಆದರೆ ಅದು ಪ್ರಸ್ತಾಪ ಆಗಿಲ್ಲ. ಈಗ ಖಾಸವಿ ವಿವಿ ಬರುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಇದೆಯಾ? ಅನ್ನುವುದನ್ನು ಸಚಿವರು ಸ್ಪಷ್ಟಪಡಿಸಬೇಕು. ಖಾಸಗೀಕರಣದಿಂದ ಮೀಸಲಾತಿಗೆ ತೊಂದರೆ ಆಗಬಾರದು ಎಂದರು.
ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಖಾಸಗಿ ವಿಶ್ವವಿದ್ಯಾಲಯಗಳು ನಾಯಿಕೊಡೆಯಂತೆ ತಲೆ ಎತ್ತುತ್ತಿವೆ. ಇವುಗಳಿಗೆ ನಿಯಂತ್ರಣ ಹೇರುವ ಬದಲು ಅವಕಾಶ ನೀಡುವುದು ಸರಿಯಲ್ಲ ಎಂದರು.
ರಾಜ್ಯವನ್ನು ಇಡೀ ವಿಶ್ವ ನೋಡುತ್ತಿದೆ: ವಿಧಾನ ಪರಿಷತ್ ಮುಖ್ಯ ಸಚೇತಕ ಮಹಂತೇಶ್ ಕವಟಗಿಮಠ ಮಾತನಾಡಿ, ಗುಣಮಟ್ಟದ ಶಿಕ್ಷಣ ನೀಡುವ ಸಂಸ್ಥೆಗಳು ಉಳಿದುಕೊಳ್ಳುತ್ತವೆ. ಅಲ್ಲದೇ ತನ್ನನ್ನು ತಾನು ಪ್ರತಿಪಾದಿಸಿಕೊಳ್ಳಲು ಅವಕಾಶ ಆಗಲಿದೆ. ರಾಜ್ಯವನ್ನು ಇಡೀ ವಿಶ್ವ ನೋಡುತ್ತಿದೆ. ಸರ್ಕಾರ ಸಹ ಇಂತಹ ವಿವಿಗಳ ಮೇಲೆ ಗಮನ ಹರಿಸಬೇಕು. ಸರ್ಕಾರಿ ವ್ಯವಸ್ಥೆಯ ಜಿಡ್ಡುಗಟ್ಟಿದ ವಾತಾವರಣಕ್ಕೆ ಖಾಸವಿ ವಿವಿಗಳು ಬಂದು ಸ್ಪರ್ಧೆ ಒಡ್ಡಬೇಕು. ಆಗ ಎಲ್ಲಾ ವ್ಯವಸ್ಥೆ ಸರಿ ಹೋಗಲಿದೆ ಎಂದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಖಾಸಗಿ ವಿಶ್ವವಿದ್ಯಾಲಯ ಕೊಡುಗೆ ಏನು ಎನ್ನುವುದು ಗೊತ್ತಿಲ್ಲ. ಸಿ.ಟಿ.ರವಿ ಇದ್ದಾಗ 22 ವಿವಿ ತಂದಿದ್ದರು. ಬಿಜೆಪಿ ಸರ್ಕಾರ ಇದ್ದಾಗಲೇ ಇಂತಹ ವಿವಿ ತಂದಿದ್ದಾರೆ. ಸರ್ಕಾರಿ ಕಾಲೇಜಿಗೆ ಗುಣಮಟ್ಟ ತುಂಬುವ ಕಾರ್ಯ ಆಗಬೇಕಿತ್ತು. ಆದರೆ ಅದು ಆಗುತ್ತಿಲ್ಲ. ಶೇ. 40ರಷ್ಟು ನಾವು ಇಲ್ಲಿಗೆ ವಿದ್ಯಾರ್ಥಿಗಳ ನೇಮಕ ಮಾಡುತ್ತೇವೆ. ಶುಲ್ಕ ನಾವು ನಿಗದಿಪಡಿಸುತ್ತೇವೆ. ಉಳಿದ ಶೇ. 60ರಷ್ಟು ನ್ಯಾಯಮೂರ್ತಿಗಳು ನಿರ್ಧರಿಸುತ್ತಾರೆ. ಸರ್ಕಾರ ನಿಗಾ ವಹಿಸಲಿದೆ, ನಿಗದಿತ ನಡವಳಿಕೆ ನಿಭಾಯಿಸದಿದ್ದರೆ ಮುಚ್ಚುವ ಅವಕಾಶ ಇರುತ್ತದೆ. ಇದು ಉತ್ತಮ ನಿರ್ಧಾರ ಎಂದರು.
ಉದ್ಯೋಗ ನೇಮಕದಲ್ಲಿಯೂ ಕನ್ನಡಿಗರಿಗೆ ಮೀಸಲಿಡಿ: ಎಲ್ಲಾ ವಿವಿಗೆ ಒಂದು ಮಿತಿ ಇರಬೇಕು. ಅದನ್ನು ಮೀರಿ ಅವರು ಹೋಗಬೇಕಿಲ್ಲ. ವಿಸ್ತರಣೆಗೆ ರಾಜ್ಯದ ಎಲ್ಲಿ ಬೇಕಾದರೂ ವಿಸ್ತರಣೆ ಮಾಡಬಹುದು ಎಂದಿದೆ. ಆದರೆ 10 ಕಿ.ಮೀ. ವ್ಯಾಪ್ತಿಗೆ ಸೀಮಿತಗೊಳಿಸಿ. ಹೊಸ ತರಗತಿ, ಸೀಟು ನಿಗದಿ, ವಿಸ್ತರಣೆಗೆ ಸರ್ಕಾರದ ಪರವಾನಗಿ ಬೇಕೆಂದು ನಿಯಮ ರೂಪಿಸಿ. ನೇಮಕಾತಿ ವಿಷಯದಲ್ಲೂ ಹಿಡಿತ ಇರಲಿ. ಹೊರ ರಾಜ್ಯ, ರಾಷ್ಟ್ರದಿಂದ ಬಂದವರು ವಿವಿ ಸ್ಥಾಪಿಸುತ್ತಾರೆ. ಉದ್ಯೋಗ ನೇಮಕದಲ್ಲಿಯೂ ಕನ್ನಡಿಗರಿಗೆ ಮೀಸಲಿಡಿ. ಇಬ್ಬರು ಎಂಎಲ್ಸಿ, ಮೂವರು ಎಂಎಲ್ಎಗಳನ್ನು ಗವರ್ನಿಂಗ್ ಕೌನ್ಸಿಲ್ಗೆ ನೇಮಿಸಿ. ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣ ಆಗದಂತೆ ನೋಡಿಕೊಳ್ಳಿ. ಹಲವು ಕಡಿವಾಣ ವಿಧಿಸಿ ಎಂದು ಸಲಹೆಯನ್ನು ನೀಡಿದರು.
ಓದಿ: ಕನ್ನಡಕ್ಕೆ ಕನ್ನಡ ನೆಲದಲ್ಲೇ ಅಪಚಾರ.. ಮಾಜಿ ಸಿಎಂ ಹೆಚ್ಡಿಕೆ ಖಂಡನೆ..
ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಮಾತನಾಡಿ, ಈ ಹಿಂದೆ ಸ್ಯಾಮ್ ಪಿತ್ರೊಡಾ ಅವರು ಜಿಲ್ಲೆಗೊಂದು ವಿಶ್ವವಿದ್ಯಾಲಯ ಬೇಕು ಎಂದಿದ್ದರು. ಆದರೆ ಇದರ ಗುಣಮಟ್ಟಕ್ಕೆ ಹಿಡಿತ ಇರಬೇಕು ಎಂದಿದ್ದರು. ಅದನ್ನು ಗಮನದಲ್ಲಿಟ್ಟುಕೊಳ್ಳಿ. ಉಪ ಕುಲಪತಿ ನೇಮಕದಲ್ಲಿ ಸರ್ಕಾರದ ಪಾತ್ರ ಇರಲಿ. ನಮ್ಮ ಸರ್ಕಾರಿ ವಿಶ್ವವಿದ್ಯಾಲಯ ನೇಮಕ ಮಾದರಿ ಅನುಸರಿಸಿ. ಇಲ್ಲಿ ಅಳವಡಿಸುವ ನಿಯಮ, ಶುಲ್ಕ ನಿಗದಿ ಬಗ್ಗೆ ಗಮನ ಹರಿಸಿ. ಸಿಬ್ಬಂದಿ, ಉದ್ಯೋಗಿ ನೇಮಕ ಸಂದರ್ಭ ಗಮನ ಹರಿಸಿ. ನಿರ್ಬಂಧ ಹೇರುವುದರಿಂದ ಕನಿಷ್ಠ ಪಕ್ಷ ಗುಣಮಟ್ಟದ ಶಿಕ್ಷಣ ಸಿಗಲು ಸಾಧ್ಯ. ನಿರ್ಬಂಧ ವಿಧಿಸದೇ ಯಶಸ್ಸು ಅಸಾಧ್ಯ. ಅನ್ಯ ರಾಜ್ಯದವರೇ ವಿವಿ ಸ್ಥಾಪಿಸಿದ್ದಾರೆ. ಈಗ ಈ ಐದು ವಿವಿ ಕುರಿತ ಮಾಹಿತಿ ನೀಡಿ ಎಂದರು.
ಜುಟ್ಟು-ಜನಿವಾರ ನಿಮ್ಮ ಹಿಡಿತದಲ್ಲಿರಲಿ: ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಮಾತನಾಡಿ, ಈ ವಿಶ್ವವಿದ್ಯಾಲಯಗಳ ಜುಟ್ಟು, ಜನಿವಾರ ನಿಮ್ಮ ಹಿಡಿತದಲ್ಲಿ ಇರಲಿ. ಇಲ್ಲವಾದರೆ ಸರ್ಕಾರ ನಿಯಂತ್ರಣ ಮಾಡುವ ಕಾರ್ಯ ಮಾಡುತ್ತಾರೆ. ಸರ್ಕಾರ ನಿಯಂತ್ರಣ ಹೇರುವ ಕಾರ್ಯ ಮಾಡಬೇಕು. ಶುಲ್ಕ ನಿಗದಿ, ಮೀಸಲಾತಿಯಲ್ಲಿ ಹಿಡಿತ ಇರಬೇಕು. ಪರೀಕ್ಷಾ ವ್ಯವಸ್ಥೆ ಹಿಡಿತದಲ್ಲಿರಲಿ. ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ ಜಾರಿಗೆ ಬರಲಿ ಎಂದರು.
ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ, ಬಿಜೆಪಿ ಸದಸ್ಯ ಪುಟ್ಟಣ್ಣ, ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪೂರ್, ಬಸವರಾಜ ಇಟಗಿ, ಪ್ರಕಾಶ್ ರಾಥೋಡ್ ಮತ್ತಿತರ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು.
ಮರಿತಿಬ್ಬೇಗೌಡ ಬೇಸರ: ತಾವು ಪರಿಷತ್ನಲ್ಲಿ ಅತ್ಯಂತ ಮಹತ್ವದ ವಿಚಾರವನ್ನು ಚರ್ಚಿಸಬೇಕಿತ್ತು. ಆದರೆ ಸಂಬಂಧಿಸಿದ ಸಚಿವರು ಇಲ್ಲದ ಹಿನ್ನೆಲೆ ಚರ್ಚೆಗೆ ಅವಕಾಶ ಸಿಗುತ್ತಿಲ್ಲ. ನಿಜಕ್ಕೂ ಈ ಅಧಿವೇಶನ ಅವಧಿಯಲ್ಲಿ ಚರ್ಚೆಗೆ ಅವಕಾಶ ಸಿಗುವುದೇ ಎನ್ನುವ ಅನುಮಾನ ಕಾಡುತ್ತಿದೆ. ಅತ್ಯಂತ ಮಹತ್ವದ ವಿಚಾರ ಇದಾಗಿದ್ದು, ಇದಕ್ಕೆ ಅವಕಾಶ ಸಿಗದಿದ್ದರೆ ಹೇಗೆ? ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಬೇಸರ ವ್ಯಕ್ತಪಡಿಸಿದರು. ಸಭಾಪತಿಗಳು ಸಭಾನಾಯಕರ ಬಳಿ ಕೇಳಿದಾಗ, ಸಚಿವರು ಬಂದ ತಕ್ಷಣ ಅವಕಾಶ ಕಲ್ಪಿಸುತ್ತೇವೆ. ನಿನ್ನೆ ಸಚಿವರು ಬಂದ ಸಂದರ್ಭದಲ್ಲಿ ಮರಿತಿಬ್ಬೇಗೌಡರು ಇರಲಿಲ್ಲ. ಇನ್ನೊಮ್ಮೆ ಬಂದಾಗ ಅವಕಾಶ ಕಲ್ಪಿಸುತ್ತೇವೆ ಎಂದರು.