ಮಂಗಳೂರು: ನಿನ್ನೆಯಿಂದ ಸಿದ್ದಾರ್ಥ್ಗಾಗಿ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದೆ. ಇಂದು ಬೆಳಗ್ಗೆ ಸುಮಾರು 6.30ಕ್ಕೆ ನಿತ್ಯ ಮೀನುಗಾರಿಕೆಗೆ ತೆರಳಿದಾಗ ನಗರದ ಹೊಯಿಗೆ ಬಜಾರ್‌ನಲ್ಲಿರುವ ಐಸ್ ಪ್ಲ್ಯಾಂಟ್ ಬಳಿ ಮೃತದೇಹ ನಮಗೆ ಕಾಣಸಿಕ್ಕಿದೆ ಎಂದು ಮೃತದೇಹವನ್ನು ಪತ್ತೆಹಚ್ಚಿದ ಮೀನುಗಾರ ರಿತೇಶ್ ಹೇಳಿದ್ದಾರೆ.
ತಕ್ಷಣ ನಾವು ಮೂವರು ಈ ಮೃತದೇಹವನ್ನು ನದಿ ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದೆವು. ಪೊಲೀಸ್ ಅಧಿಕಾರಿಗಳು ಹಾಗೂ ಮಾಜಿ ಸಚಿವ ಯು ಟಿ ಖಾದರ್ ಬಂದು ಮೃತದೇಹದ ಗುರುತು ಪತ್ತೆಹಚ್ಚಿದರು ಎಂದು ಮಾಹಿತಿ ನೀಡಿದರು.
ಮೃತದೇಹ ನದಿಯಲ್ಲಿ ತೇಲುತಿತ್ತು. ಯಾರಾದರೂ ನೀರಿಗೆ ಬಿದ್ದರೆ 18-24 ಗಂಟೆಯೊಳಗೆ ಮೃತದೇಹವು ಊದಿಕೊಳ್ಳುತ್ತದೆ. ಇದರೆ ಇವರ ಮೃತದೇಹ ಅಷ್ಟೇನು ಊದಿಕೊಂಡಿಲ್ಲ. ಮುಖ ಪರಿಚಯ ಸಿಗುತ್ತಿತ್ತು. ಮೃತದೇಹ ದೊರಕುವಾಗ ಮೈಮೇಲೆ ಬಟ್ಟೆ ಇರಲಿಲ್ಲ. ಕೇವಲ ಪ್ಯಾಂಟ್, ಶೂ ಹಾಗೂ ಕೈಯಲ್ಲೊಂದು ವಾಚು, ಉಂಗುರ ಇತ್ತು. ಮೇಲಿನಿಂದ ಬಿದ್ದ ಪರಿಣಾಮದಿಂದ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ಅದು ಬಿಟ್ಟರೆ ಮೃತದೇಹದಲ್ಲಿ ಯಾವುದೇ ದೊಡ್ಡ ಪ್ರಮಾಣದ ಗಾಯಗಳಾಗಿರಲಿಲ್ಲ ಎಂದು ಮೀನುಗಾರ ರಿತೇಶ್ ತಿಳಿಸಿದರು.