ಬೆಂಗಳೂರು: ಬೆಂಗಳೂರು ಕೃಷಿ ವಿವಿಯಿಂದ ಮೊದಲ ಬಾರಿ ಕೃಷಿ ಮೇಳದಲ್ಲಿ ‘ಬೀಜ ಸಂತೆ’ ಆಯೋಜಿಸಲಾಗಿದೆ. ಬೀಜ ಸಂತೆಯಲ್ಲಿ ಸಿರಿಧಾನ್ಯಗಳಾದ ಸಾಮೆ, ರಾಗಿ, ನವಣೆ, ಬರಗು, ಹಾರಕ, ದ್ವಿದಳ ಧಾನ್ಯ, ಎಣ್ಣೆಕಾಳು, ಮೇವಿನ ಬೆಳೆ ಹಾಗೂ ಹಣ್ಣು, ತರಕಾರಿ ಬೀಜಗಳಾದ ಬೆಂಡೆ, ಹಾಗಲಕಾಯಿ, ಅವರೆ, ಮೆಂತೆ, ಪಾಲಕ್, ಮೆಣಸು, ಬೀನ್ಸ್ ಸೇರಿದಂತೆ ಇತರೆ ಸಾಂಪ್ರದಾಯಿಕ ತಳಿಗಳ ಬೀಜಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ.
ಇಲ್ಲಿ ಬೀಜೋತ್ಪಾದನೆ ಕೈಗೊಂಡು ಯಶಸ್ವಿ ರೈತರ ಅನುಭವನ್ನು ಹಂಚಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸಂಶೋಧನಾ ಕೇಂದ್ರದ ತಜ್ಞರ ಗೋಷ್ಠಿಗಳು ಸಹ ನಡೆಯುತ್ತಿವೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಕರ್ನಾಟಕ ರಾಜ್ಯ ಎಣ್ಣೆಕಾಳು ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಬೀಜ ಪ್ರಮಾಣ ಸಂಸ್ಥೆ ಸೇರಿದಂತೆ 100ಕ್ಕೂ ಅಧಿಕ ಖಾಸಗಿ ಕಂಪನಿಗಳು ಬೀಜೋತ್ಪಾದನೆ, ಸಂಸ್ಕರಣೆ, ಮಾರುಕಟ್ಟೆ, ಮಾರಾಟದ ಕುರಿತು ರೈತರ ಜೊತೆ ಮಾಹಿತಿ ಹಂಚಿಕೊಳ್ಳಲಾಗುತ್ತದೆ.
ಕೃಷಿ ವಿಜ್ಞಾನಿಗಳು ಮಳೆ ಕೊರತೆಯ ಹಿನ್ನೆಲೆಯಲ್ಲಿ ಕಡಿಮೆ ನೀರು ಬಳಸಿಕೊಂಡು ಬೆಳೆಯುವ ರಾಗಿ, ಭತ್ತ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ ಸೇರಿ ಹಲವು ಬೆಳೆಗಳ ಬಗ್ಗೆ ರೈತರಿಗೆ ಮಾರ್ಗದಶರ್ನ ನೀಡುತ್ತಿದ್ದಾರೆ. ಕೃಷಿ ಮೇಳದಲ್ಲಿ ಕೃಷಿಯ ನೂತನ ತಂತ್ರಜ್ಞಾನ, ಜಲಾನಯನ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿ, ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಾಣಿಕೆ, ಸಿರಿಧಾನ್ಯ, ಮಾರುಕಟ್ಟೆ, ಮಳೆ, ಮೇಲ್ಛಾವಣಿ ನೀರು ಕೊಯ್ಲು, ಕೃಷಿಯಲ್ಲಿ ಡ್ರೋನ್ ಬಳಕೆ, ನೂತನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ, ಹನಿ, ತುಂತುರು ಮತ್ತು ಸಾವಯವ ಕೃಷಿ, ಸುಧಾರಿತ ಕೃಷಿ ಯಂತ್ರಗಳು, ಸಮಗ್ರ ಬೇಸಾಯ ಪದ್ಧತಿಗಳ ಕುರಿತು ಪ್ರಾತ್ಯಕ್ಷಿಕೆ ಕೂಡ ನೀಡಲಾಗುತ್ತಿದೆ.
ಯುವ ರೈತರು ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡು ಸ್ವ ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಬೀಜ ಸಂತೆ ಆಯೋಜಿಸಲಾಗಿದೆ. ಇದು ಬೀಜೋತ್ಪಾದನೆ ಸಂಸ್ಥೆ ಮತ್ತು ರೈತರಿಗೆ ಒಂದೇ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ.
-ಡಾ.ವಿ.ಎಲ್. ಮಧುಪ್ರಸಾದ್, ಜಿಕೆವಿಕೆ ವಿಸ್ತರಣಾ ನಿರ್ದೇಶಕ
ಹಸಿರು ಕ್ರಾಂತಿ ನಿರಂತರವಾಗಿ ಆಗಬೇಕು-ಸಿಎಂ: ''ಹಸಿರು ಕ್ರಾಂತಿ ನಿರಂತರವಾಗಿ ಆಗಬೇಕಾದರೆ, ಹೊಸ ತಳಿಗಳು, ಹೊಸ ಔಷಧ, ಮಣ್ಣಿನ ಫಲವತ್ತತೆ, ತಂತ್ರಜ್ಞಾನ, ರೈತರಿಗೆ ನ್ಯಾಯಯುತ ಬೆಲೆ, ಆಹಾರ ಸಂಗ್ರಹಣೆಗೆ ಗೋದಾಮುಗಳು ಆಗಬೇಕು. ಇದರಿಂದ ಸುಸ್ಥಿರವಾದ ಕೃಷಿ ಬೆಳವಣಿಗೆ ಆಗುತ್ತದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ ಉದ್ಘಾಟಿಸಿ ಕೃಷಿ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು. ''ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಮೊದಲು ಸ್ಥಾಪಿಸಲಾಗಿದೆ. 6 ದಶಕಗಳಿಂದ ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳವನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ರಾಜ್ಯದ ರೈತರಿಗೆ ಕೃಷಿಯಲ್ಲಿ ಆಗಿರುವ ಆವಿಷ್ಕಾರ ಹಾಗೂ ಬೆಳವಣಿಗೆಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಾ ಬಂದಿದೆ. ಕೃಷಿಕರಿಗೆ ವಿಶ್ವವಿದ್ಯಾಲಯದಲ್ಲಿ ಆಗುವ ತಂತ್ರಜ್ಞಾನದ ಅಭಿವೃದ್ಧಿ, ಹೊಸ ತಳಿಗಳು, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು ಮುಂತಾದವನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕು'' ಎಂದರು.
''ಕೃಷಿ ವಿದ್ಯಾಲಯ ಕೇವಲ ಕೃಷಿ ಪದವೀಧರರನ್ನು ತಯಾರು ಮಾಡುವ ಸಂಸ್ಥೆಯಲ್ಲ. ಕೃಷಿ ವಿದ್ಯಾರ್ಥಿಗಳನ್ನು ತಯಾರಿಸುವ ಜೊತೆಗೆ ಸಂಶೋಧನೆಗಳಿಗೆ ಒತ್ತು ನೀಡಬೇಕು. ಹೆಚ್ಚು ಒಣ ಭೂಮಿ ಇರುವ ರಾಜ್ಯ ಕರ್ನಾಟಕ. ಹೆಚ್ಚು ರೈತರು ಕೃಷಿಯನ್ನು ಅವಲಂಬಿಸಿದ್ದಾರೆ. ನಾವು ಎಲ್ಲಾ ರೈತರೂ ಕೃಷಿಯನ್ನು ಬಿಡದಂತೆ ಮಾಡಬೇಕಾದರೆ, ಕೃಷಿ ಲಾಭದಾಯಕವಾಗಬೇಕು. ಕೃಷಿ ಲಾಭದಾಯಕವಾಗದೇ ಹೋದರೆ, ಬಹಳಷ್ಟು ರೈತರು ಕೃಷಿಯನ್ನು ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೃಷಿ ಮಾಡಿ ಬದುಕಬಹುದು ಎಂಬ ಪರಿಸ್ಥಿತಿ ನಿರ್ಮಿಸುವ ಜವಾಬ್ದಾರಿ ಕೃಷಿ ವಿವಿಗಳಲ್ಲಿ ಕೆಲಸ ಮಾಡುವ ವಿಜ್ಞಾನಿಗಳು, ಅಧ್ಯಾಪಕರು ಹೆಚ್ಚು ಒತ್ತು ನೀಡಬೇಕು'' ಎಂದು ಸಲಹೆ ನೀಡಿದರು.
ಕಡಿಮೆ ನೀರಿನಲ್ಲಿಯೂ ಬೆಳೆಯುವ ತಳಿಗಳು ಅಗತ್ಯ- ಸಿಎಂ: ''ಕೃಷಿ ವಿವಿ 5 ಹೊಸ ತಳಿಗಳನ್ನು ಬಿಡುಗಡೆ ಮಾಡಿರುವುದು ಸಂತೋಷ. ತಳಿಗಳು ನೀರು ಕಡಿಮೆಯಿದ್ದಾಗಲೂ ಬೆಳೆಯುವುದು ಸಾಧ್ಯವಿರಬೇಕು. ರೋಗನಿರೋಧಕಕ ಶಕ್ತಿ ಇರುವಂತೆ ಆಗಬೇಕು. ಬಹಳಷ್ಟು ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆ, ಬೆಳೆ ಇಲ್ಲದೇ, ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕಷ್ಟದಲ್ಲಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಬರಗಾಲಕ್ಕೆ ತುತ್ತಾಗುವ ಸ್ಥಿತಿ ಇದೆ. ಮೊದಲು 4ರಿಂದ 5 ವರ್ಷಗಳಿಗೊಮ್ಮೆ ಬರಗಾಲ ಬರುತ್ತಿತ್ತು. ಕೆಲವೊಮ್ಮೆ ಭೀಕರ ಬರಗಾಲ ಬರುತ್ತದೆ. ಈ ಬಾರಿ 223 ತಾಲ್ಲೂಕುಗಳಲ್ಲಿ ಬರಗಾಲ ಘೋಷಣೆ ಮಾಡಲಾಗಿದೆ. ಹೆಚ್ಚು ಕಡಿಮೆ ಶೇ.90 ರಷ್ಟು ಬರಗಾಲ ಉಂಟಾಗಿದೆ'' ಎಂದು ವಿವರಿಸಿದರು.
''ಸರ್ಕಾರ ಸಹಾಯಧನ ಕೊಟ್ಟರೂ, ನೀರಿ ಕೊಡಬಹುದು. ಆದರೆ, ಬೆಳೆಯ ನಷ್ಟವನ್ನು ತುಂಬಿಕೊಡಲು ಸಾಧ್ಯವಾಗುವುದಿಲ್ಲ. ನಷ್ಟ ಭರಿಸುತ್ತೇವೆ ಎಂದರೆ, ಅದು ರೈತರನ್ನು ತಪ್ಪು ದಾರಿಗೆ ಎಳೆದಂತಗುತ್ತದೆ. ಸುಮಾರು 33 ಸಾವಿರ ಕೋಟಿ ರೂ.ಗಳಷ್ಟು ನಷ್ಟವಾಗಿದೆ. ಎನ್ಡಿಆರ್ಎಫ್ ಮಾರ್ಗಸೂಚಿಯ ಪ್ರಕಾರ ಸರ್ಕಾರ 17,900 ಕೋಟಿ ರೂ.ಗಳ ಪರಿಹಾರ ಕೇಳಿದೆ. 16 ಸಾವಿರ ಕೋಟಿಯಷ್ಟು ರೈತರಿಗೆ ನಷ್ಟವಾಗುತ್ತದೆ. ಬೆಳೆವಿಮೆ ಮಾಡಿದ್ದರೂ ಪೂರ್ಣ ನಷ್ಟ ಭರಿಸಲು ಸಾಧ್ಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ರೈತರನ್ನು ಕಾಪಾಡುವುದು ಸರ್ಕಾರದ ಹಾಗೂ ವಿವಿಗಳ ಜವಾಬ್ದಾರಿ'' ಎಂದರು.
ರೈತರು ಬಹುಬೆಳೆಗಳನ್ನು ಬೆಳೆಯಬೇಕು- ಸಿಎಂ: ''ರೈತರು ವರ್ಷಪೂರ್ತಿ ಜಮೀನಿನಲ್ಲಿ ದುಡಿಯುತ್ತಾರೆ. ಈ ಶ್ರಮಜೀವಿಗಳ ಜೀವನವನ್ನು ಹಸನುಗೊಳಿಸಲು, ಕೃಷಿ ವಿವಿಗಳು ಹೆಚ್ಚಿನ ಸಂಶೋಧನೆಯನ್ನು ಕೈಗೊಳ್ಳಬೇಕು. ವಿಶ್ವವಿದ್ಯಾಲಯದಲ್ಲಿ ಪದವೀಧರರನ್ನು ತಯಾರು ಮಾಡುವ ಜೊತೆಗೆ ಸಂಶೋಧನೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಸಿರಿಧಾನ್ಯಗಳು, ಸೇರಿದಂತೆ ವಿವಿಧ ಬೆಳೆಗಳಿಗೆ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹೆಚ್ಚಿನ ಬೇಡಿಕೆ ಇರುವ ಸಿರಿಧಾನ್ಯಗಳನ್ನು ಬೆಳೆಸಲು ರೈತರಲ್ಲಿ ಜಾಗೃತಿ ಮೂಡಿಸಬೇಕು. ರೈತರ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆ ವ್ಯವಸ್ಥೆಯನ್ನು ಪೂರೈಸಬೇಕು.
ನಮ್ಮ ಸರ್ಕಾರ ರೈತರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ. ಕೃಷಿ ವಿವಿಗಳು ಹೊಸ ತಳಿಗಳು, ಹೊಸ ಸಂಶೋಧನೆಗಳನ್ನು ನಡೆಸಲು ಹೆಚ್ಚಿನ ಹಣವನ್ನೂ ಸರ್ಕಾರ ನೀಡಲು ಸಿದ್ಧವಿದೆ. ನಮ್ಮ ಸರ್ಕಾರ ಕೃಷಿ ಭಾಗ್ಯ ಯೋಜನೆ ಪುನ: ಜಾರಿ ಮಾಡಿದೆ. ಹೊಸ ತಳಿಗಳನ್ನು ಬೆಳೆಯುವ ಮೂಲಕ ರೈತರಿಗೆ ಹೆಚ್ಚಿನ ಫಸಲು ದೊರೆಯುತ್ತದೆ. ಬಹುಬೆಳೆಗಳನ್ನು ಬೆಳೆಯುವ ಪ್ರವೃತ್ತಿಯನ್ನು ರೈತರು ಬೆಳೆಸಿಕೊಳ್ಳಬೇಕು. ಇಂದು ಪುರಸ್ಕೃತರಾಗಿರುವ ರೈತ ಸಾಧಕರ ಸಾಧನೆಗಳು ರೈತರಿಗೆ ಮಾದರಿಯಾಗಬೇಕು'' ಎಂದು ತಿಳಿಸಿದರು.
ಇದನ್ನೂ ಓದಿ: ಜಿಕೆವಿಕೆ ಕೃಷಿಮೇಳ: ರೈತ ಸ್ನೇಹಿ ಪರ್ಯಾಯ ಮೂರು ತಳಿಗಳ ಪರಿಚಯ