ಬೆಂಗಳೂರು : ವಿಜಯದಶಮಿ ಹಬ್ಬದ ವೇಳೆಗೆ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೊದಲ ಪಟ್ಟಿ ಹೊರ ಬೀಳಲಿದೆ. ಹಬ್ಬಕ್ಕೆ ಉಡುಗೊರೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ನಿಗಮ ಮಂಡಳಿಗಳಿಗೆ ಶಾಸಕರ ನೇಮಕಾತಿ ಸಂಬಂಧ ನಿನ್ನೆ ದೆಹಲಿಯಲ್ಲಿ ಹೈಕಮಾಂಡ್‌ಗೆ ಪಟ್ಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಪೂರೈಸಿರುವ ನಡುವೆಯೇ ನಿಗಮ ಮಂಡಳಿಗಳ ನೇಮಕಾತಿಗೂ ಮುಖ್ಯಮಂತ್ರಿಗಳು ಮುಂದಾಗಿದ್ದು, ಮೊದಲ ಹಂತದಲ್ಲಿ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡಲು ನಿರ್ಧರಿಸಿದ್ದಾರೆ.
ಕಾಂಗ್ರೆಸ್‌ನ ಸುಮಾರು 30 ಮಂದಿ ಶಾಸಕರನ್ನು ಪ್ರಮುಖ ನಿಗಮ ಮಂಡಳಿಗಳಿಗೆ ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ದೆಹಲಿಯಲ್ಲಿ ನಡೆದ ಎಐಸಿಸಿ ಕಾರ್ಯಕಾರಿಣಿ ಸಭೆ ಸಂದರ್ಭದಲ್ಲಿ ವರಿಷ್ಠರೊಂದಿಗೆ ಚರ್ಚಿಸಿದ್ದಾರೆ. ಯಾವೆಲ್ಲಾ ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡಬಹುದು ಎಂಬ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ. ಸಿಎಂ ನೀಡಿರುವ ಪಟ್ಟಿಯಲ್ಲಿ 30 ಮಂದಿ ಕಾಂಗ್ರೆಸ್ ಶಾಸಕರ ಹೆಸರಿದ್ದು, ಯಾರಿಗೆ ಯಾವ ನಿಗಮ ಮಂಡಳಿ ನೀಡಬಹುದು ಎಂಬ ಬಗ್ಗೆಯೂ ಈ ಪಟ್ಟಿಯಲ್ಲಿ ವಿವರಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಜತೆ ಸಮಾಲೋಚನೆ ನಡೆಸಿದ್ದು, ನಿಗಮ ಮಂಡಳಿಗಳಿಗೆ ಶಾಸಕರು ಹಾಗೂ ಕಾರ್ಯಕರ್ತರನ್ನು ಶೇ. 50:50 ಅನುಪಾತದಲ್ಲಿ ನೇಮಕ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟು, ಅದರಂತೆ ಮೊದಲ ಹಂತದಲ್ಲಿ 30 ಶಾಸಕರನ್ನು ನಿಗಮ ಮಂಡಳಿಗೆ ನೇಮಕ ಮಾಡುವ ಪಟ್ಟಿ ನೀಡಿದ್ದಾರೆ. ಈ ಪಟ್ಟಿಗೆ ಹೈಕಮಾಂಡ್ ವಿಜಯದಶಮಿಯೊಳಗೆ ಒಪ್ಪಿಗೆ ನೀಡುವ ಸಾಧ್ಯತೆ ಇದ್ದು, ವಿಜಯದಶಮಿಗೆ ಹಲವು ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷಗಿರಿಯ ಉಡುಗೊರೆ ಸಿಗುವುದು ಖಚಿತ ಎನ್ನಲಾಗಿದೆ.
ಇದನ್ನೂ ಓದಿ : ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ನೀತಿ ; ಪ್ರಸ್ತಾವನೆಗೆ ವಸತಿ ಇಲಾಖೆಗೆ ಮುಖ್ಯಮಂತ್ರಿ ಸೂಚನೆ
ಮುಖ್ಯಮಂತ್ರಿಗಳು ನೀಡಿರುವ ಪಟ್ಟಿಯನ್ನು ಪಡೆದುಕೊಂಡಿರುವ ವರಿಷ್ಠರು ಈ ಪಟ್ಟಿ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರುಗಳ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಮಾಜಿ ಸಚಿವರು, ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ಕೊಡಬೇಡಿ.. ಕಾರ್ಯಕರ್ತರನ್ನೇ ಪರಿಗಣಿಸಿ - ಕೈ ಮುಖಂಡರ ಆಗ್ರಹ
ಮುಂದಿನ ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಾಸಕರು, ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರುಗಳನ್ನು ನಿಗಮ ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನವರಾತ್ರಿ ಹೊತ್ತಿಗೆ ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಮೊದಲ ಪಟ್ಟಿ ಹೊರ ಬೀಳಲಿದ್ದು, ಎಲ್ಲರ ಚಿತ್ತ ಹೈಕಮಾಂಡ್ ನತ್ತ ನೆಟ್ಟಿದೆ.
ಇದನ್ನೂ ಓದಿ : ನಿಗಮ ಮಂಡಳಿ ನೇಮಕಕ್ಕೆ ಸಮಿತಿ ರಚನೆ : ಸಿಎಂ ಸಿದ್ದರಾಮಯ್ಯ