ಕೆಆರ್ ಪುರ: ಕೆ.ಆರ್. ಪುರ ಕ್ಷೇತ್ರದ ಬಸವನಪುರ ವಾರ್ಡ್ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಾರ್ಡ್ ಅಧ್ಯಕ್ಷೆ ವರಲಕ್ಷ್ಮಮ್ಮ ನೇತ್ರದಾನ ಮಾಡುವ ಮೂಲಕ ಚಾಲನೆ ನೀಡಿದರು.
ಮೇಡಹಳ್ಳಿಯ ಕೋದಂಡರಾಮಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಪಿ. ಕೋದಂಡರಾಮಯ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಎರಡು ದಶಕಗಳಿಂದ ಉಚಿತ ಶಿಕ್ಷಣ ನೀಡುತ್ತಿರುವ ಶಿಶುಮಂದಿರ ನಿರ್ದೇಶಕ ಶೇಷಗಿರಿ, ನಿಕಟಪೂರ್ವ ಕ್ಷೇತ್ರ ಕಸಾಪ ಅಧ್ಯಕ್ಷ ಕಲ್ಕೆರೆ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಿತ್ತಗನೂರಿನ ಶಿಶುಮಂದಿರ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಿತ್ತಗನೂರಿನ ಗಣೇಶ ಮಂದಿರದಿಂದ ಎರಡು ಕಿಮೀವರೆಗೂ ಶಾಲಾ ಮಕ್ಕಳ ಡ್ರಮ್ಸ್, ಕನ್ನಡ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ವಿವಿಧ ವೇಷಧಾರಿಗಳು ಮತ್ತು ಶಿಶುಮಂದಿರ ಶಾಲಾ ಮಕ್ಕಳ ಡೊಳ್ಳು ಕುಣಿತ ಮೆರವಣಿಗೆಯ ಆಕರ್ಷಣೆಯಾಗಿತ್ತು.
ಕನ್ನಡ ನಾಡು ನುಡಿ, ಸಾಹಿತ್ಯ, ವಿಜ್ಞಾನ, ವಿದ್ಯೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ಸನ್ಮಾನಿಸಲಾಯಿತು. ವನಕಲ್ ಮಠದ ಪೀಠಾಧ್ಯಕ್ಷ ಬಸವಾನಂದ ಸ್ವಾಮಿಜಿ, ಬೆಂಗಳೂರು ನಗರ ಜಿಲ್ಲೆ ಕಸಾಪ ಅಧ್ಯಕ್ಷ ಮಾಯಣ್ಣ, ಮಹದೇವಪುರ ಕಸಾಪ ಅಧ್ಯಕ್ಷ ಅಜಿತ್, ಬಸವನಪುರ ವಾರ್ಡ್ ಅಧ್ಯಕ್ಷೆ ವರಲಕ್ಷ್ಮಮ್ಮ, ಸಮಾಜ ಸೇವಕ ಗಿರೀಶ್ ಕುಮಾರ್ ನಾಯ್ಡು, ಕರುನಾಡ ರೈತ ಸಂಘದ ಅಧ್ಯಕ್ಷ ಮೆಹಬೂಬ್ ಪಾಷ, ಕರ್ನಾಟಕ ಕಾರ್ಮಿಕರ ಹಾಗೂ ನಾಗರಿಕರ ಸಂಘದ ರಾಜ್ಯಾದ್ಯಕ್ಷ ಶಿವಕುಮಾರ್ ಸೇರಿದಂತೆ ಮತ್ತಿತರ ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.