ಹೈದ್ರಾಬಾದ್: ನಿಷ್ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ ಯಾವಾಗಲೂ ಪರಿಸರ ವಿಪತ್ತುಗಳಿಗೆ ಕಾರಣವಾಗುತ್ತದೆ. ಅಪಾಯಕಾರಿ ತ್ಯಾಜ್ಯವನ್ನು ಖಾಲಿ ಸ್ಥಳಗಳಲ್ಲಿ ಎಸೆಯುವುದು ಮತ್ತು ಅಸಮರ್ಪಕ ಕಸ ಸುಡುವಿಕೆಯು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಅಪಾಯವನ್ನುಂಟು ಮಾಡುತ್ತದೆ. ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಮೂಲಕ ಹೈದರಾಬಾದ್ ನಗರ ಹೊಸ ಹೆಜ್ಜೆ ಇಟ್ಟಿದೆ.
ಹಾಗಿದ್ದರೆ, ಕಸವನ್ನು ವಿಲೇವಾರಿ ಮಾಡುವ ಸರಿಯಾದ ದಾರಿ ಯಾವುದು? ಅಂದ್ರೆ, ಹೈದರಾಬಾದ್ ಬಳಿ ಈ ಪ್ರಶ್ನೆಗೆ ಉತ್ತರವಿದೆ. ನಗರ ಮೂಲದ ಜವಾಹರನಗರ ಡಂಪ್ ಯಾರ್ಡನ್ನು ವಿದ್ಯುತ್ ಉತ್ಪಾದಿಸಲು ವಿನ್ಯಾಸಗೊಳಿಸಲಾಗಿದ್ದು, ದಕ್ಷಿಣ ಭಾರತದಲ್ಲಿ ಈ ಸಾಧನೆ ಮಾಡಿದ ಮೊದಲ ನಗರ ಹೈದ್ರಾಬಾದ್ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಈ ಸ್ಥಾವರದಿಂದ 17.40 ಕೋಟಿ ಯುನಿಟ್ ವಿದ್ಯುತ್ ಉತ್ಪಾದಿಸಲು ಅಧಿಕಾರಿಗಳು ಯೋಜಿಸಿದ್ದು, ನಗರದಾದ್ಯಂತ ಇದೇ ರೀತಿಯ ಯೋಜನೆಗಳು ಜಾರಿಗೆ ಬರಲಿವೆ. ಒಪ್ಪಂದದ ಪ್ರಕಾರ, ಘನತ್ಯಾಜ್ಯ ಸುಡುವಿಕೆಯ ಮೂಲಕ ಉತ್ಪತ್ತಿಯಾಗುವ ವಿದ್ಯುತ್ತಿನ ಪ್ರತಿ ಯೂನಿಟ್ಗೆ ಬೆಲೆ 7.84 ರೂ. ಈ ಸಮಯದಲ್ಲಿ ಇದು ದುಬಾರಿ ವ್ಯವಹಾರವೆಂದು ತೋರುತ್ತದೆಯಾದರೂ, ಈ ವ್ಯವಸ್ಥೆಯು ಒಂದು ನಿರ್ದಿಷ್ಟ ಅವಧಿಯಲ್ಲಿ ಲಾಭದಾಯಕವಾಗಬಹುದು.
ಪ್ರತಿದಿನ 300 ಟನ್ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಉದ್ದೇಶದಿಂದ ತಿಮಾರ್ಪುರ (ದೆಹಲಿ) ಯೋಜನೆಯನ್ನು 1987 ರಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಮುಂದಿನ ಕೆಲವು ದಶಕಗಳಲ್ಲಿ, ವಿವಿಧ ರಾಜ್ಯಗಳಲ್ಲಿ ಕನಿಷ್ಠ 180 ಜೈವಿಕ ಅನಿಲ ಮತ್ತು ಜೈವಿಕ-ಸಿಎನ್ಜಿ ಯೋಜನೆಗಳನ್ನು ಪ್ರಾರಂಭಿಸಲಾಯಿತು.
ಜೈವಿಕ ಅನಿಲ ಯೋಜನೆಗಳಲ್ಲಿ ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಮುಂಚೂಣಿಯಲ್ಲಿವೆ. ಆದಾಗ್ಯೂ, ವಿದ್ಯುತ್ ಮತ್ತು ರಸಗೊಬ್ಬರಗಳನ್ನು ಉತ್ಪಾದಿಸಲು ಸುಡುವ ತ್ಯಾಜ್ಯಗಳನ್ನು ಬಳಸುವುದರ ಮೂಲಕ ಹೈದರಾಬಾದ್ ಪ್ರತ್ಯೇಕವಾಗಿ ನಿಲ್ಲಲಿದೆ. ಅಗ್ಗದ ಇಂಧನ ಉತ್ಪಾದನೆಯ ಈ ವಿಧಾನವನ್ನು ಅಳವಡಿಸಿಕೊಳ್ಳಲು ಉಳಿದ ಪ್ರಮುಖ ನಗರಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಸರ್ಕಾರಗಳು ನಿರ್ವಹಿಸಬೇಕು.