ಬೆಂಗಳೂರು : ಅರ್ಕಾವತಿ ಬಡಾವಣೆಯಲ್ಲಿ ಮೂಲ ಸೌಕರ್ಯಗಳು ಸಿಗದೆ ದಶಕಗಳಿಂದಲೇ ಸಮಸ್ಯೆಯಾಗುತ್ತಿತ್ತು. ಇದೀಗ ಬಿಡಿಎ ಅಧ್ಯಕ್ಷರಾದ ಎಸ್.ಆರ್.ವಿಶ್ವನಾಥ್, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಜೊತೆಗೂಡಿ ಬೈರತಿ ಕಾನೆ ಗ್ರಾಮಕ್ಕೆ ಭೇಟಿ ನೀಡಿ ಭೂ ಮಾಲೀಕರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಕೆಲವು ರೈತರು ಬಡಾವಣೆ ನಿರ್ಮಾಣಕ್ಕೆ ಜಮೀನು ನೀಡಿ ಹಲವು ವರ್ಷಗಳೇ ಕಳೆದಿದ್ದರೂ ಬಿಡಿಎಯಿಂದ ಸೂಕ್ತ ಪರಿಹಾರ ದೊರೆತಿಲ್ಲ. ಪರಿಹಾರ ನೀಡುವಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಬೇಕು. ತಮಗೆ ಪರಿಹಾರ ನೀಡುವವರೆಗೆ ಬಡಾವಣೆ ಅಭಿವೃದ್ಧಿಪಡಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಇನ್ನೇನು ಕೆಲವೇ ದಿನಗಳಲ್ಲಿ ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನಿವೇಶನಗಳನ್ನು ಗುರುತು ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಮೊದಲು ಭೂಮಿ ನೀಡಿರುವ ರೈತರಿಗೆ ನೀಡಬೇಕಾಗಿರುವ ನಿವೇಶನಗಳನ್ನು ನೀಡಿದ ನಂತರ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ರಸ್ತೆ ಕಾಮಗಾರಿ ಆರಂಭಕ್ಕೆ ಸೂಚನೆ : ಅರ್ಕಾವತಿ ಬಡಾವಣೆಗೆ ಸಂಪರ್ಕ ಕಲ್ಪಿಸುವ ಹೆಣ್ಣೂರು ಮುಖ್ಯರಸ್ತೆಯಿಂದ ಬೈರತಿಕಾನೆ ಗ್ರಾಮದವರೆಗೆ ಸುಮಾರು 500 ಮೀಟರ್ ಉದ್ದದ ರಸ್ತೆ ಕಾಮಗಾರಿಗೆ ತಕ್ಷಣವೇ ಚಾಲನೆ ನೀಡುವಂತೆ ಅಧಿಕಾರಿಗಳಿಗೆ ವಿಶ್ವನಾಥ್ ಸೂಚನೆ ನೀಡಿದರು.
ಬಿಡಿಎ ಕೈಗೆತ್ತಿಕೊಳ್ಳಲಿರುವ ಅರ್ಕಾವತಿ ಅಥವಾ ಇನ್ನಾವುದೇ ಬಡಾವಣೆಗಳ ನಿರ್ಮಾಣಕ್ಕೆಂದು ಭೂಮಿಯನ್ನು ನೀಡಲಿರುವ ರೈತರಿಗೆ ಮೊದಲು ನಿವೇಶನ ಮತ್ತು ಪರಿಹಾರವನ್ನು ನೀಡಲು ನಿರ್ಧರಿಸಲಾಗಿದೆ. ನಂತರವಷ್ಟೇ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದರು.
ಬಿಡಿಎ ಖ್ಯಾತಿಗೆ ಕಪ್ಪು ಚುಕ್ಕೆಯಂತಿರುವ ಅರ್ಕಾವತಿ ಬಡಾವಣೆಯಲ್ಲಿ ಹಲವಾರು ಅಕ್ರಮಗಳು ನಡೆದಿವೆ. ಈ ಕಪ್ಪು ಚುಕ್ಕೆಯನ್ನು ಅಳಿಸಬೇಕಿದ್ದು, ಸದ್ಯದಲ್ಲಿಯೇ ಬಡಾವಣೆಯಲ್ಲಿ ಉಳಿದಿರುವ ನಿವೇಶನಗಳನ್ನು ಗುರುತು ಮಾಡಿ ರೈತರಿಗೆ ಕೊಡಬೇಕಿರುವ ನಿವೇಶನಗಳನ್ನು ಮೊದಲು ನೀಡಲಾಗುತ್ತದೆ ಎಂದರು.