ಬೆಂಗಳೂರು: ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ವಾಹನಗಳ ಅಪಘಾತ ಯಾವಾಗ ಬೇಕಾದರೂ ಸಂಭವಿಸಬಹುದು. ಇಂತಹ ಸಂದರ್ಭದಲ್ಲಿ ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣಕ್ಕೆ ಉಪಚರಿಸಲು ಪ್ರಥಮ ಚಿಕಿತ್ಸಾ ಕಿಟ್ ಬೇಕೇಬೇಕು. ಹೀಗಾಗಿಯೇ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇರಬೇಕು ಎಂದು ಮೋಟಾರು ವಾಹನ ಕಾಯ್ದೆ ಹೇಳಿದೆ. ಆದರೆ ಆ ನಿಯಮ ಕಡತಕ್ಕೆ ಮಾತ್ರ ಸೀಮಿತವಾದಂತಿದೆ.
ಅಪಘಾತ ಸಂಭವಿಸಿದ ವೇಳೆ ಗಾಯಗೊಂಡವರನ್ನು ತಕ್ಷಣಕ್ಕೆ ಉಪಚರಿಸಲು ಕಿಟ್ ಅಗತ್ಯವಾಗಿದ್ದರೂ ಅದು ನಗಣ್ಯಕ್ಕೆ ಪಾತ್ರವಾಗಿದೆ. ಕೆಲವು ಬಸ್ಗಳಲ್ಲಿ ಕಿಟ್ಗಳಿದ್ದರೂ ಅವು ಕೇವಲ ಬಾಕ್ಸ್ಗೆ ಸೀಮಿತವಾಗಿವೆ. ಅದರಲ್ಲಿ ಯಾವುದೇ ರೀತಿಯ ಔಷಧ ಇರುವುದಿಲ್ಲ. ಪ್ರಥಮ ಚಿಕಿತ್ಸಾ ಕಿಟ್ ಕಡ್ಡಾಯವಾಗಿ ಅಳವಡಿಸದೆ ಸಾರಿಗೆ ಇಲಾಖೆಯಿಂದ ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಲಾಗುತ್ತಿದೆ.
ವಾಯುವ್ಯ ಕರ್ನಾಟಕ ಸಾರಿಗೆ ಬಸ್ ಹಾಗೂ ನಗರ ಸಾರಿಗೆಗೆ ಸೇರಿದ ಯಾವುದೇ ಬಸ್ಗಳಲ್ಲಿ ಈ ಕಿಟ್ ಕಾಣ ಸಿಗುವದಿಲ್ಲ. ಬಸ್ನಲ್ಲಿ ಸಂಚರಿಸುವಾಗ ಯಾವುದಾದರೂ ಅಪಘಾತ ಹಾಗೂ ಅವಘಡವಾದರೆ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವವರೆಗೆ, ಗಾಯಾಳು ಪ್ರಾಣ ಉಳಿಸುವ ಉದ್ದೇಶದಿಂದ ಈ ಕಿಟ್ ಅವಶ್ಯಕ. ಆದ್ರೆ ಇಲ್ಲಿ ಮಾತ್ರ ಎಲ್ಲಾ ತದ್ವಿರುದ್ಧವಾಗಿದೆ.
ಡೆಟಾಲ್, ಡ್ರೆಸ್ಸಿಂಗ್ ಬಟ್ಟೆ, ಗಾಯದ ಮುಲಾಮು ಇಡುವ ಡಬ್ಬಿಗಳೇ ಮಾಯವಾಗಿವೆ. ಇದರಿಂದಾಗಿ ಪ್ರಯಾಣಿಕ ಪ್ರಥಮ ಚಿಕಿತ್ಸೆಯಿಂದ ವಂಚಿತನಾಗಿ ಪ್ರಾಣಹಾನಿ ಸಂಭವಿಸಬಹುದು. ಈ ಬಗ್ಗೆ ಕೆಲ ವಾಹನ ಚಾಲಕರು ಹಾಗೂ ನಿರ್ವಾಹಕರು ಪ್ರತಿಕ್ರಿಯಿಸಲು ನಿರಾಕರಿಸಿದ್ರೆ, ಉನ್ನತ ಅಧಿಕಾರಿಗಳು ಮಾಧ್ಯಮಕ್ಕೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಒಂದು ಮೂಲದ ಪ್ರಕಾರ ಪ್ರತಿ ವರ್ಷ ಪ್ರಥಮ ಚಿಕಿತ್ಸಾ ಕಿಟ್ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದ್ರೆ ಯಾವ ಬಸ್ಗಳಲ್ಲಿಯೂ ಒಂದು ಡೆಟಾಲ್ ಕೂಡ ಕಾಣಿಸುವುದಿಲ್ಲ. ಅದು ಎಲ್ಲಿಗೆ ಹೋಗುತ್ತೆ ಎಂಬ ಬಗ್ಗೆಯೂ ಮಾಹಿತಿ ಇಲ್ಲ. ಇದರ ಹಿಂದೆ ಅಕ್ರಮದ ವಾಸನೆ ಬಡಿಯುತ್ತಿದೆ. ಇದಕ್ಕೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕಡಿವಾಣ ಹಾಕಿ ಸಾರ್ವಜನಿಕ ಬಸ್ಗಳಲ್ಲಿ ಪ್ರಾಥಮಿಕ ಚಿಕಿತ್ಸಾ ಕಿಟ್ ಇಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ. ವಾಹನ ಮಾಲೀಕ ಮತ್ತು ಚಾಲಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸಾರಿಗೆ ಇಲಾಖೆ ಮಾಡಬೇಕಾಗಿದೆ.