ಆನೇಕಲ್: ಕಾಡಾನೆಗಳ ಗುಂಪಿನಲ್ಲಿದ್ದ ಮರಿಯಾನೆಗೆ ಬೇಟೆಗಾರರು ಗುಂಡು ಹಾರಿಸಿ ಕೊಂದಿರುವ ಘಟನೆ ಕರ್ನಾಟಕಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಜವಳಗಿರಿ ಅರಣ್ಯ ಪ್ರದೇಶ ವ್ಯಾಪ್ತಿಯ ಚೆನ್ನಮಲಂನಲ್ಲಿ ನಡೆದಿದೆ.
30 ಕ್ಕೂ ಹೆಚ್ಚು ಕಾಡಾನೆಗಳು ಜವಳಗಿರಿ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿದ್ದು, ಈ ಗುಂಪಿನಲ್ಲಿ ಸಾಕಷ್ಟು ಮರಿಯಾನೆಗಳಿವೆ. ಆಹಾರ ಅರಸಿ ಆನೆಗಳ ಹಿಂಡು ಚೆನ್ನಮಲಂಗೆ ಬಂದಾಗ ಬೇಟೆಗಾರರು ಆನೆಯ ದಂತಕ್ಕಾಗಿ ಗುಂಪಿನಲ್ಲಿದ್ದ ಆನೆಗೆ ಗುಂಡು ಹಾರಿಸಿದ್ದಾರೆ. ಈ ವೇಳೆ ಆಯತಪ್ಪಿ ಗುಂಡು ಮರಿಯಾನೆಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ.
ಬೇಟೆಗಾರರು ಕಾಡಾನೆಗಳ ಗುಂಪಿನ ಮೇಲೆ ಗುಂಡು ಹಾರಿಸುತ್ತಿದ್ದಂತೆ ಎಲ್ಲ ಆನೆಗಳು ಚೆಲ್ಲಾಪಿಲ್ಲಿಯಾಗಿವೆ. ಸ್ಥಳಕ್ಕೆ ಕೃಷ್ಣಗಿರಿ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪಶು ವೈದ್ಯಕೀಯ ತಂಡದ ಸಹಾಯದಿಂದ ಮರಿಯಾನೆ ಶವಪರೀಕ್ಷೆ ನಡೆಸಿದ್ದು, 3 ಸುತ್ತಿನ ಗುಂಡು ಹಾರಿಸಿ ಸಾಯಿಸಿದ್ದಾರೆ ಎಂಬ ವರದಿ ಬಂದಿದೆ.