ಬೆಂಗಳೂರು: ಮಾರತ್ತಹಳ್ಳಿ ಬ್ರಿಡ್ಜ್ ಸಮೀಪ ಮೂರಂತಸ್ತಿನ ಕಟ್ಟಡದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸೋಮವಾರ ತಡರಾತ್ರಿ 11.45ರ ಸುಮಾರಿಗೆ ಘಟನೆ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಕಟ್ಟಡದಲ್ಲಿದ್ದ ಬಟ್ಟೆ ಅಂಗಡಿ ಸುಟ್ಟು ಕರಕಲಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಕಟ್ಟಡದ ಮುಂದೆ ಇದ್ದ ತೆಂಗಿನ ಮರ, ಅಂಗಡಿ ಪಕ್ಕದಲ್ಲಿದ್ದ ಟ್ರಾನ್ಸ್ಫಾರ್ಮರ್ ಕೂಡ ಬೆಂಕಿಗಾಹುತಿ ಆಗಿವೆ. ಅಷ್ಟೇ ಅಲ್ಲದೇ ಪಕ್ಕದ ಕಟ್ಟಡಕ್ಕೂ ಬೆಂಕಿ ಆವರಿಸಿ ಮೂರ್ನಾಲ್ಕು ಅಂಗಡಿಗೂ ತಗುಲಿದೆ.
ಬೆಂಕಿ ಅವಘಡಕ್ಕೆ ಸೂಕ್ತ ಕಾರಣ ತಿಳಿದುಬಂದಿಲ್ಲ. ಅಂಗಡಿ ಪಕ್ಕದಲ್ಲೇ ಇದ್ದ ಟ್ರಾನ್ಸ್ಫಾರ್ಮರ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಹೊತ್ತಿಕೊಂಡ ವೇಳೆ ಈ ನಾಲ್ವರು ಕಟ್ಟಡದಲ್ಲಿದ್ದರು. ಕೂಡಲೇ ಇದನ್ನು ಗಮನಿಸದ ಮೂವರು ಪಕ್ಕದ ಕಟ್ಟಡಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಇನ್ನೋರ್ವನನ್ನು ಕಟ್ಟಡಕ್ಕೆ ಏಣಿ ಹಾಕಿ ಕೆಳಕ್ಕೆ ಇಳಿಸಿಕೊಳ್ಳಲಾಗಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. ಈ ವೇಳೆ ಓರ್ವ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಸುಮಾರು ಎರಡೂವರೆ ಗಂಟೆ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ಹತೋಟಿಗೆ ಬಂದಿದೆ. ಅಂಗಡಿಯಲ್ಲಿದ್ದ ಬಟ್ಟೆ ಸುಟ್ಟು ಕರಕಲಾಗಿದೆ ಎಂದು ಅಗ್ನಿ ಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ: ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೊದಲು ಪಕ್ಕದ ಕಟ್ಟಡಕ್ಕೆ ಹೊತ್ತಿಕೊಳ್ಳುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ನಂತರ ಕಟ್ಟಡದ ಹೊರಗೆ ಉರಿಯುತ್ತಿದ್ದ ಬೆಂಕಿ ಆರಿಸಿದ್ದಾರೆ. ಏಣಿ ಮೂಲಕ ಮೊದಲ ಮಹಡಿಗೆ ಎಂಟ್ರಿ ಕೊಟ್ಟ ಸಿಬ್ಬಂದಿ ಹೊಗೆ ಮಧ್ಯೆ ಬಿಎ (ಬ್ರೀತಿಂಗ್ ಅಪರೇಟ್) ಧರಿಸಿ ಕಟ್ಟಡದೊಳಗೆ ಪ್ರವೇಶಿಸಿದ್ದಾರೆ. ಉಸಿರಾಟ ಸಲಕರಣೆ ಧರಿಸಿ ಕಟ್ಟಡದ ತುದಿಯಲ್ಲಿ ಕುಳಿತು ಬೆಂಕಿ ನಂದಿಸಿದ್ದಾರೆ. ಮತ್ತೊಂದು ತಂಡ ಕಟ್ಟರ್ನಿಂದ ಶೆಟರ್ ಕೊರೆದು ಒಳಗಿನಿಂದ ಬೆಂಕಿಯನ್ನು ನಂದಿಸಿದ್ದಾರೆ.
ಪ್ರತ್ಯೇಕ ಘಟನೆ, ಮಲ್ಲೇಶ್ವರದಲ್ಲಿನ ಬಟ್ಟೆ ಅಂಗಡಿಗೂ ಬೆಂಕಿ: ಮಲ್ಲೇಶ್ವರಂ ಸಂಪಿಗೆ ರಸ್ತೆ ಸಿಗ್ನಲ್ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಂಗಡಿಯಲ್ಲಿದ್ದ ಬಟ್ಟೆ ಸುಟ್ಟು ಕರಕರಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಮಾಲೀಕರು ಅಂಗಡಿಯಲ್ಲಿ ಕಂಪ್ಯೂಟರ್ ಅನ್ನು ಬಂದ್ ಮಾಡದೇ ಬೀಗ ಹಾಕಿ ಹೋಗಿದ್ದರು. ಈ ವೇಳೆ ಕಂಪ್ಯೂಟರ್ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಇಡೀ ಅಂಗಡಿಗೆ ವ್ಯಾಪಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಸಿಲಿಂಡರ್ ಸ್ಫೋಟಗೊಂಡು ಮನೆಗೆ ಬೆಂಕಿ; ಹಸುಗೂಸು ಸೇರಿ 7 ಜನರಿಗೆ ಗಂಭೀರ ಗಾಯ