ಬೆಂಗಳೂರು: ಸಿಗರೇಟ್ ವಿತರಕರಿಂದ ಸಿಸಿಬಿಯ ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳು ಲಂಚ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಎಸಿಪಿ ಪ್ರಭುಶಂಕರ್ ಪ್ರಮುಖ ಆರೋಪಿಯಾದರೆ ಇನ್ಸ್ಪೆಕ್ಟರ್ ಗಳಾದ ಅಜಯ್ ಹಾಗೂ ನಿರಂಜನ್ ಇತರ ಆರೋಪಿಗಳಾಗಿದ್ದು, ಇವರಿಗೆ ಬಂಧನದ ಭೀತಿ ಎದುರಾಗಿದೆ.
ಲಾಕ್ಡೌನ್ ವೇಳೆಯಲ್ಲಿ ಸಿಗರೇಟ್ ವ್ಯಾಪಾರಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಲು ಸಿಗರೇಟ್ ವಿತರಕರಿಂದ ಸುಮಾರು 1.75 ಕೋಟಿ ಸುಲಿಗೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆ, ಸಿಸಿಬಿ ಡಿಸಿಪಿ ರವಿಕುಮಾರ್ ತನಿಖೆ ನಡೆಸಿ ನಗರ ಪೊಲೀಸ್ ಆಯುಕ್ತ ಹಾಗೂ ಸಿಸಿಬಿಯ ಹೆಚ್ಚುವರಿ ಆಯುಕ್ತರಾದ ಸಂದೀಪ್ ಪಾಟೀಲ್ ಅವರಿಗೆ ವರದಿ ನೀಡಿದ್ದರು. ಪ್ರಕರಣದ ಗಂಭೀರತೆ ಅರಿತು ನಗರ ಆಯುಕ್ತ ಡಿಜಿ ಮತ್ತು ಐಜಿ ಪ್ರವೀಣ್ ಸೂದ್ ಅವರಿಗೆ ವರದಿ ನೀಡಿದ್ದು, ಸದ್ಯ ಪ್ರಕರಣ ಗಂಭೀರವಾಗಿ ಪರಿಗಣಿಸುವಂತೆ ಡಿಜಿ ಸೂಚನೆ ನೀಡಿದ್ದಾರೆ.
ಈ ದಂಧೆಯಲ್ಲಿ ಭಾಗಿಯಾದ ಪೊಲೀಸರಿಗೆ ಸದ್ಯ ಬಂಧನ ಭೀತಿ ಎದುರಾಗಿದೆ. ಪ್ರಕರಣದ ಮಾಹಿತಿ ಮೊದಲು ಸಿಸಿಬಿ ಅಧಿಕಾರಿಗಳಿಗೆ ಗೊತ್ತಾಗುತ್ತಿದ್ದ ಹಾಗೆ ಎಸಿಪಿ ಪ್ರಭು ಶಂಕರ್ನನ್ನ ವಿಚಾರಣೆಗೆ ಒಳಪಡಿಸಿದ್ರು. ವಿಚಾರಣೆ ವೇಳೆ ಲಂಚ ಪಡೆದಿದ್ದು ಸಾಬೀತು ಆದ ಕಾರಣ ಅಧಿಕಾರಿಗಳನ್ನ ಅಮಾನತು ಮಾಡಿ ಈಗಾಗಲೇ ಅಧಿಕಾರಿಗಳಿಂದ 30 ಲಕ್ಷ ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ. ಸದ್ಯ ಕಾಟನ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.