ಬೆಂಗಳೂರು: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಓ ಎಂ. ವಾಸುದೇವ್ ಮಯ್ಯ ಆತ್ಮಹತ್ಯೆ ಪ್ರಕರಣ ಸಂಬಂಧ 11 ಮಂದಿ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಗುರು ರಾಘವೇಂದ್ರ ಕೋ ಆಪರೇಟಿವ್ ಸೊಸೈಟಿಯಲ್ಲಿ ವಾಸುದೇವ್ ಮಯ್ಯ ಅವರು ಸಿಇಓ ಆಗಿದ್ದ ಸಂದರ್ಭದಲ್ಲಿ ನಡೆದ ಅವ್ಯವಹಾರದ ಬಗ್ಗೆ ಸಿಐಡಿ ತನಿಖೆಯನ್ನು ಚುರುಕುಗೊಳಿಸಿದ ಬೆನ್ನಲ್ಲೆ ಅವರು ಕಳೆದ ಸೋಮವಾರ ರಾತ್ರಿ ಕಾರಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಇದೀಗ ವಾಸುದೇವ್ ಮಯ್ಯ ಅವರ ಪುತ್ರಿ ರಶ್ಮಿ, ಸಾಲ ಪಡೆದವರ ಮಾನಸಿಕ ಕಿರುಕುಳಕ್ಕೆ ನನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ತಂದೆಗೆ ಬ್ಯಾಂಕ್ ವಹಿವಾಟಿನ ಬಗ್ಗೆ ತಿಳುವಳಿಕೆ ಇಲ್ಲದೇ ಇದ್ದುದರಿಂದ ಕಂಪ್ಯೂಟರ್ ಪಾಸ್‌ವರ್ಡನ್ನು ಸಹೋದ್ಯೋಗಿಗಳಿಗೆ ನೀಡಿದ್ದರು. ಬ್ಯಾಂಕ್ ಬೋರ್ಡ್ ಸದಸ್ಯರ ಅನುಮತಿಯಂತೆ ಸಾಲ ನೀಡಲಾಗಿದ್ದು, 2019ರಲ್ಲಿ ಆರ್‌ಬಿಐ ಆಡಿಟ್ ವೇಳೆ ಸರಿಯಾದ ದತ್ತಾಂಶ ನೀಡಿಲ್ಲ. ಜೊತೆಗೆ ಆರ್‌ಬಿಐ ಪರಿವೀಕ್ಷಣೆ ವೇಳೆ ತಂದೆಯಿಂದ ಬಲವಂತವಾಗಿ ದಾಖಲೆಗಳ ಮೇಲೆ ಸಹಿ ಪಡೆಯಲಾಗಿದೆ.
ಬ್ಯಾಂಕ್‌ನ ಮುಖ್ಯ ಕಚೇರಿ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇದ್ದು, ಅವ್ಯವಹಾರ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ಸಂಶಯ ಉಂಟುಮಾಡುತ್ತಿದೆ ಎಂದಿದ್ದಾರೆ.
ಅಲ್ಲದೆ ನನ್ನ ತಂದೆಯನ್ನು ಮಾಡದ ತಪ್ಪಿಗೆ ಹೊಣೆಗಾರನನ್ನಾಗಿ ಮಾಡಲಾಗಿದೆ. ಇದರಿಂದಾಗಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ಸೊಸೈಟಿಯ ಸಿಇಓ ಸಂತೋಷ್‌ಕುಮಾರ್, ರವಿ ಐತಾಳ್, ರಾಕೇಶ್, ಶ್ರೀಪಾದ ಹೆಗಡೆ ಮತ್ತು ಪ್ರಶಾಂತ್ ಎಂಬುವವರು ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ರಘುನಾಥ್, ರೆಡ್ಡಿ ಬ್ರದರ್ಸ್, ಕುಮರೇಶ್, ರಜತ್, ತಲ್ಲಂ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.