ಬೆಂಗಳೂರು : ಕಳೆದು ಹೋದ ಪಾಸ್‌ಪೋರ್ಟ್ ಅನ್ನು ಮತ್ತೆ ಪಡೆಯಲು ಕೋರಿ ಸಲ್ಲಿಸುವ ಅರ್ಜಿಯೊಂದಿಗೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಥಮ ವರ್ತಮಾನ ವರದಿಯ (ಎಫ್‌ಐಆರ್) ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ. ಪಾಸ್‌ಪೋರ್ಟ್ ಮರು ವಿತರಿಸಲು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ (ಆರ್‌ಪಿಒ) ಸೂಚನೆ ನೀಡಲು ಕೋರಿ ಬೆಂಗಳೂರಿನ ಇಟ್ಟಮಡು ನಿವಾಸಿ ಶ್ರೀಧರ ಕುಲಕರ್ಣಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಹೊರಡಿಸಿತು.
ಅರ್ಜಿದಾರರ ಪ್ರಕರಣವು ಹೊಸ ಪಾಸ್‌ಪೋರ್ಟ್ ವಿತರಣೆಗೆ ಸಂಬಂಧಿಸಿದ್ದಲ್ಲ. ಈಗಾಗಲೇ ವಿತರಿಸಲಾಗಿದ್ದ ಪಾಸ್‌ಪೋರ್ಟ್ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮರು ವಿತರಣೆಗೆ ಕೋರಿರುವ ಪ್ರಕರಣವಾಗಿದೆ. ಪಾಸ್‌ಪೋರ್ಟ್ ಅಧಿನಿಯಮ -1980ರಲ್ಲಿ ಕಳೆದು ಹೋದ ಪಾಸ್‌ಪೋರ್ಟ್ ಮರು ವಿತರಣೆಗೆ ಕೋರಿ ಸಲ್ಲಿಸುವ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳ ನಮೂನೆಯ ಕುರಿತು ಹೇಳಲಾಗಿದ್ದು, ಎಫ್‌ಐಆರ್ ಪ್ರತಿಯೂ ಆ ದಾಖಲೆಗಳಲ್ಲೊಂದು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಪಾಸ್‌ಪೋರ್ಟ್ ಮರುವಿತರಣೆಗೆ ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿಲ್ಲ ಎಂದು ತಿಳಿಸಿ ಮನವಿ ತಿರಸ್ಕರಿಸಿದೆ.
ವಿದೇಶ ಪ್ರಯಾಣ ಮೂಲಭೂತ ಹಕ್ಕು. ಆದರೆ, ಅದನ್ನು ಪಾಸ್‌ಪೋರ್ಟ್ ಕಾಯ್ದೆ ಹಾಗೂ ಪಾಸ್‌ಪೋರ್ಟ್ ಅಧಿನಿಯಮಗಳಿಂದ ನಿಯಂತ್ರಿಸಲಾಗುತ್ತದೆ. ನಿಯಮಗಳು ನಿರ್ದಿಷ್ಟ ಕಾರ್ಯ ವಿಧಾನವನ್ನು ರೂಪಿಸಿರುವಾಗ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ಪ್ರತಿಯೊಬ್ಬರೂ ಅದನ್ನು ಪಾಲಿಸಬೇಕು. ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಆರ್‌ಪಿಒ ಅದನ್ನು ಕಾನೂನು ಪ್ರಕಾರ ಪರಿಗಣಿಸಿ ಆದಷ್ಟು ಶೀಘ್ರ ತೀರ್ಮಾನಿಸಬೇಕು ಎಂದು ತಿಳಿಸಿದ ಪೀಠ ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣವೊಂದು ಬಾಕಿಯಿದ್ದು, ಈ ನಡುವೆ 2023 ರ ಜೂನ್ 14ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರ್ಜಿದಾರರ ವಿದೇಶ ಪ್ರಯಾಣಕ್ಕೆ ಅನುಮತಿ ನೀಡಿತ್ತು. ಈ ಮಧ್ಯೆ, ತಮ್ಮ ಪಾಸ್‌ಪೋರ್ಟ್ ಕಳೆದುಹೋಗಿರುವ ಹಿನ್ನೆಲೆಯಲ್ಲಿ ಡೂಪ್ಲಿಕೇಟ್ ಪಾಸ್‌ಪೋರ್ಟ್ ವಿತರಿಸುವಂತೆ ಕೋರಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಆರ್‌ಪಿಒ ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ : ತ್ಯಜಿಸಿದ ತಂದೆಯ ಹೆಸರನ್ನು ಅಪ್ರಾಪ್ತರ ಪಾಸ್‌ಪೋರ್ಟ್‌ನಿಂದ ತೆಗೆದುಹಾಕಬಹುದು: ದೆಹಲಿ ಹೈಕೋರ್ಟ್
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪಾಸ್‌ಪೋರ್ಟ್ ಕಳೆದುಕೊಂಡಾಗ ಹೊಸದಾಗಿ ವಿತರಿಸುವುದು ಆರ್‌ಪಿಒ ಕರ್ತವ್ಯ. ಅಲ್ಲದೆ, ವಿದೇಶ ಪ್ರಯಾಣಕ್ಕೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅನುಮತಿ ನೀಡಿದೆ. ಆದ್ದರಿಂದ, ಪಾಸ್‌ಪೋರ್ಟ್ ವಿತರಿಸಲು ಆರ್‌ಪಿಒಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರದ ಪರ ವಕೀಲರು, ವಿದೇಶ ಪ್ರಯಾಣ ಮೂಲಭೂತ ಹಕ್ಕು. ಅದು ಪಾಸ್‌ಪೋರ್ಟ್ ಕಾಯ್ದೆಯಡಿ ನಿಯಂತ್ರಿಸಲ್ಪಡುತ್ತದೆ. ಈ ಮೊದಲು ವಿತರಿಸಿದ್ದ ಪಾಸ್‌ಪೋರ್ಟ್ ಕಳೆದುಕೊಂಡಿರುವ ಅರ್ಜಿದಾರರು ನವೀಕರಿಸಿದ ಪಾಸ್‌ಪೋರ್ಟ್ ಕೋರುತ್ತಿದ್ದಾರೆ. ಆದರೆ, ಅರ್ಜಿದಾರರು ತಮ್ಮ ಮನವಿಯೊಂದಿಗೆ ಎಫ್‌ಐಆರ್ ಪ್ರತಿ ಲಗತ್ತಿಸಿಲ್ಲ. ಆದ್ದರಿಂದ, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.