ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಧಾರವಾಡದಲ್ಲಿ ಎಫ್ಐಆರ್ ದಾಖಲಾಗಿರುವ ವಿಚಾರದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ನಡೆಯಿತು. ಸದನದಲ್ಲಿ ಸರ್ಕಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಭಾಪತಿಯಾಗಿರುವವರ ಮೇಲೆ ಎಫ್ಐಆರ್ ಆಗಿರುವುದರಿಂದ ಆ ಪೀಠಕ್ಕೆ ಅಗೌರವ ತೋರಿದಂತಾಗಿದೆ. ನಿಯಮ ಉಲ್ಲಂಘನೆ ಕೂಡ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಯು.ಬಿ. ವೆಂಕಟೇಶ ಬಜೆಟ್ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪ ಮಾಡಿದರು. ಎಸ್ಪಿ ಬಂದು ಸದನದಲ್ಲಿ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು. ಯಾವುದೇ ಶಾಸಕರನ್ನು ಬಂಧಿಸಬೇಕು ಅಂದರೆ ಮೊದಲು ಸಭಾಪತಿಗಳ ಅನುಮತಿ ಪಡೆದುಕೊಳ್ಳಬೇಕು. ಇಂಥ ಸಾಂವಿಧಾನಿಕ ಹುದ್ದೆಯಲ್ಲಿರುವ ಸಭಾಪತಿ ವಿರುದ್ಧವೇ ಎಫ್ಐಆರ್ ಆದರೆ ಅದು ನಿಯಮ ಬಾಹಿರ. ಎಫ್ಐಆರ್ ಆದ ಸಂದರ್ಭದಲ್ಲಿ ತಾನು ಬೆಂಗಳೂರಿನಲ್ಲೇ ಇದ್ದೆ, ಬೆಳಗಿನ ಜಾವ 3 ಗಂಟೆಗೆ ಎಸ್‌ಪಿ ಫೋನ್ ಮಾಡ್ತಾರೆ ಎಂದು ಸಭಾಪತಿ ಹೊರಟ್ಟಿ ವಿವರಿಸಿದರು.
ಅಲ್ಲಂ ವೀರಭದ್ರಪ್ಪ, ರಮೇಶ್ ಗೌಡ, ತೇಜಸ್ವಿನಿಗೌಡ, ಭೋಜೇಗೌಡ, ಶ್ರೀಕಂಠೇಗೌಡ, ಕೆ. ಗೋವಿಂದರಾಜ್ ಮಾತನಾಡಿ, ಸಭಾಪತಿ ಪೀಠದ ಮೇಲೆ ಕೇವಲ ಮೂರು ಗಂಟೆಯ ಒಳಗೆ ಕ್ರಮ ಕೈಗೊಳ್ಳುವುದು ಎಷ್ಟು ಸರಿ. ವಿಧಾನಪರಿಷತ್ಗೆ ಅವಮಾನ ಆದಂತೆ. ಸರ್ಕಾರ ಸಹ ಸಭಾಪತಿಗಳನ್ನು ಅವಹೇಳನ ಮಾಡಿದ್ದರಿಂದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಆಗಬೇಕು. ತಪ್ಪಾಗಿದೆ ಎಂದು ಎಸ್ಪಿ ಅವರೇ ಎಂದಾಗ ಎಷ್ಟು ಸರಿ. ಒಂದು ಜಾತಿನಿಂದನೆ ಪ್ರಕರಣವನ್ನು ಮಧ್ಯರಾತ್ರಿ 12 ಕ್ಕೆ ದಾಖಲಿಸಿ, 3 ಗಂಟೆಗೆ ವಿಚಾರಣೆಗೆ ಎಸ್.ಪಿ. ಕರೆಸಿದ್ದು ಎಷ್ಟು ಸರಿ? ಕೂಡಲೇ ಸಂಬಂಧಿಸಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಸದನಕ್ಕೆ ಕರೆಸಿ ಛೀಮಾರಿ ಹಾಕಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಪೂರ್ವದಲ್ಲಿ ಸೂರ್ಯ ಉದಯಿಸುವುದು ಎಷ್ಟು ಸತ್ಯವೋ, ರಾಜ್ಯದಲ್ಲಿ ಮತ್ತೆ ಕಮಲ ಅರಳುವುದು ಅಷ್ಟೇ ಸತ್ಯ: ಸಿಎಂ ಬೊಮ್ಮಾಯಿ
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಪ್ರಕರಣ ದಾಖಲಾದ ಮಾರನೇ ದಿನವೇ ಸಭಾಪತಿಗಳನ್ನು ಸಂಪರ್ಕಿಸಿದ್ದೇನೆ. ಈ ಹಂತದವರೆಗೂ ಸಮಾಲೋಚನೆ ನಡೆಸಿದ್ದೇನೆ. ಈ ಸಂಬಂಧ ವಿಚಾರಣೆ ನಡೆಸಿ, ಮಾಹಿತಿ ತರಿಸಿಕೊಂಡು ಕೂಲಂಕುಶವಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಈ ಕೂಡಲೇ ಅಮಾನತು ಗೊಳಿಸುವುದಕ್ಕೆ ಸರ್ಕಾರಕ್ಕೆ ಅಧಿಕಾರ ಇದೆ. ಎಸ್ಪಿ ಕ್ಷಮಾಪಣೆ ಕೇಳಿರುವ ಹಿನ್ನೆಲೆಯಲ್ಲಿ ಕೂಡಲೇ ಅಮಾನತುಗೊಳಿಸಿ. ಇಲ್ಲವಾದರೆ ಹೇಳಿ ನಾವು ಸದನದಿಂದ ಆಚೆ ಹೋಗುತ್ತೇವೆ ಎಂದು ಹೇಳಿದರು.
ಗೃಹ ಸಚಿವರು ಮಾತನಾಡಿ, ಮೂರ್ನಾಲ್ಕು ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ. ಯಾರಿಂದ ತೊಂದರೆ ಆಗಿದೆ, ನಿಜವಾಗಿ ಯಾರಿಂದ ತಪ್ಪಾಗಿದೆ ಎನ್ನುವುದನ್ನು ತಿಳಿದು ಕ್ರಮ ಕೈಗೊಳ್ಳುತ್ತೇವೆ ಎಂದರು.
ಗೃಹಸಚಿವರು ಪೀಠದ ಗೌರವ ಕಾಪಾಡಬೇಕು. ಇಲ್ಲಿ ಗೃಹ ಸಚಿವರು ಒಂದು ಮಹತ್ವದ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯವರೆಗೂ ನಾವು ಹೋರಾಟ ಮುಂದುವರಿಸುತ್ತೇವೆ. ಪೀಠಕ್ಕೆ ನ್ಯಾಯ ಸಿಗುವವರೆಗೂ ಧರಣಿ ನಡೆಸುತ್ತೇವೆ ಎಂದು ಜೆಡಿಎಸ್ ಸದಸ್ಯರು ಬಾವಿಗಿಳಿದು ಧರಣಿಗೆ ಮುಂದಾದರು. ಗೃಹ ಸಚಿವರು ಎರಡು ದಿನದಲ್ಲಿ ಮಾಹಿತಿ ಪಡೆದು ಸದನಕ್ಕೆ ವಿವರಣೆ ಇಲ್ಲವೇ ಕ್ರಮದ ಮಾಹಿತಿ ನೀಡುವುದಾಗಿ ತಿಳಿಸಿದರು.
ಜಾತಿ ನಿಂದನೆ ಕೇಸು ಸಭಾಪತಿಗಳ ಮೇಲೆಯೇ ಆಗಿರುವಾಗ ದಯೆ, ದಾಕ್ಷಿಣ್ಯ ನೋಡಬೇಡಿ. ಕಾರ್ಯ ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸದಸ್ಯರೆಲ್ಲಾ ಒತ್ತಾಯಿಸಿದರು. ಸಭಾಪತಿ ಪೀಠದಲ್ಲಿದ್ದ ಶ್ರೀಕಂಠೇಗೌಡರು ಎರಡು ದಿನದಲ್ಲಿ ಈ ಸಮಸ್ಯೆಗೆ ಪರಿಹಾರ ಕಲ್ಪಿಸಿ, ಕೈಗೊಂಡ ಕ್ರಮದ ಮಾಹಿತಿ ನೀಡಿ ಎಂದರು.