ಬೆಂಗಳೂರು : ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿಗೆ ತುತ್ತಾದವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ರೆ, ಮತ್ತೊಂದೆಡೆ ಸೋಂಕಿತರ ಜೊತೆ ಸಂಪರ್ಕ ಹೊಂದಿದವರನ್ನು ಹೋಂ ಕ್ವಾರಂಟೈನ್ ಮಾಡಿ ಮನೆಯಿಂದ ಹೊರ ಹೋಗದಂತೆ ನೋಡಿಕೊಳ್ಳಲಾಗುತ್ತಿದೆ.
ಆದರೆ, ಮೂರು ಪ್ರತ್ಯೇಕ ಪ್ರಕರಣದಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ಓಡಾಡಿದವರ ವಿರುದ್ಧ ಬೇಗೂರು ಠಾಣೆಯಲ್ಲಿ ದೂರು ದಾಖಲಾಗಿದೆ. ಗಾರೆಬಾವಿ ಪಾಳ್ಯ ನಿವಾಸಿ ಕೃಷ್ಣ, ಹೊಸಪಾಳ್ಯ ನಿವಾಸಿ ಚಕ್ರಧರ, ಕೂಡ್ಲುಗೇಟ್ ನೋವೆಲ್ ಟೆಕ್ ಪಾರ್ಕ್ ನಿವಾಸಿ ಗೌತಮ್ ಎಂಬುವರ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
![FIR against three who violated quarantine rule in Bengaluru](https://etvbharatimages.akamaized.net/etvbharat/prod-images/7841755_973_7841755_1593578435551.png)
ಈ ಮೂವರ ಕುಟುಂಬಸ್ಥರಿಗೆ ಸೋಂಕು ತಗುಲಿರುವ ಕಾರಣ ಹೋಂ ಕ್ವಾರಂಟೈನ್ನಲ್ಲಿರುವಂತೆ ಸೂಚಿಸಲಾಗಿತ್ತು. ಆದರೆ, ಇವರು ನಿಯಮ ಉಲ್ಲಂಘಿಸಿ ಮನೆಯಿಂದ ಹೊರ ಹೋಗಿದ್ದು, ಈ ಬಗ್ಗೆ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಕ್ವಾರಂಟೈನ್ನಲ್ಲಿ ಇದ್ದ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಮೂವರು ಹೊರ ಹೋಗಿರುವುದು ಗೊತ್ತಾಗಿದೆ. ಬಿಬಿಎಂಪಿ ಅಧಿಕಾರಿಗಳ ದೂರಿನ ಮೇರೆಗೆ ಸರ್ಕಾರಿ ಆದೇಶ ಉಲ್ಲಂಘನೆಯಡಿ ಎಫ್ಐಆರ್ ದಾಖಲು ಮಾಡಿ ತನಿಖೆ ಮುಂದುವರಿಸಲಾಗಿದೆ.