ಬೆಂಗಳೂರು: ಚುನಾವಣೆಯಲ್ಲಿ ಮತದಾರರಿಗೆ ಆಮೀಷವೊಡ್ಡಲು ಕೆಲ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಇಪ್ಪತ್ತು ರೂಪಾಯಿ ನೋಟುಗಳನ್ನೇ ಕೋಡ್ ವರ್ಡ್ ರೀತಿ ಬಳಸಿಕೊಂಡು ಹಣ ಹಂಚಿಕೆ ಮಾಡಿರುವ ಬಗ್ಗೆ ಎಫ್ಐಆರ್ ದಾಖಲಾಗಿದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಮತ್ತು ಅವರ ಬೆಂಬಲಿಗರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ದೊಡ್ಡ ಮಟ್ಟದ ಹಣದ ದಂಧೆಗೆ ಈ ಮಾರ್ಗ ಬಳಕೆಯಾಗುವುದು ಕೇಳಿ ಬಂದಿದೆ. ಅರ್ಧ ಅಥವಾ ಪೂರ್ತಿ ನೋಟನ್ನು ದಂಧೆಯ ರೂವಾರಿಗಳು ಹೇಳಿದವರಿಗೆ ತೋರಿಸಬೇಕು. ನೋಟಿನಲ್ಲಿರುವ ನಂಬರುಗಳು ಹೊಂದಾಣಿಕೆಯಾದರೆ ಮಾತ್ರ ಹಣದ ವರ್ಗಾವಣೆಯಾಗುತ್ತದೆ. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿಯೂ ಇಂಥಹದ್ದೇ ತಂತ್ರ ಮಾಡಲಾಗಿದೆ. ಕಬ್ಬನ್ ಪೇಟೆಯಲ್ಲಿ ದುಡ್ಡು ಹಂಚಲು ಈ ವಿಧಾನವೇ ಬಳಕೆಯಾಗಿದ್ದು, ಇಪ್ಪತ್ತು ರೂಪಾಯಿ ತೋರಿಸಿದರೆ ಎರಡು ಸಾವಿರ ರೂ ಹಣ ಸಿಗುತ್ತಿತ್ತು ಎಂದು ಆರೋಪಿಸಲಾಗಿದೆ.
ಬೆಳಗ್ಗೆ ಮತದಾರರಿಗೆ ಇಪ್ಪತ್ತು ರೂಪಾಯಿ ಹಂಚುತ್ತಿದ್ದ ಆರೋಪಿಗಳು ಅವರು ಹೇಳಿದವರ ಬಳಿ ಹೋಗಿ ಆ ನೋಟುಗಳನ್ನು ತೋರಿಸಲು ಸೂಚಿಸುತ್ತಿದ್ದರು. ಇಪ್ಪತ್ತು ರೂಪಾಯಿ ತೋರಿಸಿದರೆ ಎರಡು ಸಾವಿರ ಕೊಡಲಾಗುತ್ತಿತ್ತು. ಮತದಾರರ ಗುರುತಿನ ಚೀಟಿ ಇದ್ದವರಿಗೆ ಹೀಗೆ ಹಣ ಹಂಚುತ್ತಿದ್ದವರು ಪಕ್ಷೇತರ ಅಭ್ಯರ್ಥಿಯೊಬ್ಬರ ಕಡೆಯವರು ಎಂದು ಆರೋಪಿಸಲಾಗಿದೆ.
ಫ್ಲೈಯಿಂಗ್ ಸ್ಕ್ವಾಡ್ ಲೀಡರ್ ನೀಡಿರುವ ದೂರಿನನ್ವಯ ಕೃಷ್ಣಯ್ಯ ಶೆಟ್ಟಿ ಹಾಗೂ ಅವರ ಕಡೆಯವರಾದ ಚಂದ್ರಶೇಖರ್, ವಸಂತ್ ಕುಮಾರ್ ಹಾಗೂ ವೆಂಕಟೇಶ್ ಎಂಬಾತನ ಮೇಲೆ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಪ್ಪತ್ತು ರೂ ಮುಖಬೆಲೆಯ ಕೆಲ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: "ಜನಸಂಘರ್ಷ"ಕ್ಕಿಳಿಯುವ ಮುನ್ನ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಿ: ಸಚಿನ್ ಪೈಲಟ್
ನಿನ್ನೆ ನೀತಿ ಸಂಹಿತೆ ಹಿಂಪಡೆದ ಚುನಾವಣಾ ಆಯೋಗ: 2023 ವಿಧಾನಸಭಾ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಚುನಾವಣಾ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ನಿನ್ನೆ ಹಿಂದಕ್ಕೆ ಪಡೆದಿದೆ. ಮಾ.29 ರಿಂದ ರಾಜ್ಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಇದೀಗ ರಾಜ್ಯದ ವಿಧಾನಸಭೆ ಚುನಾವಣೆ ಮೇ 10 ರಂದು ನಡೆದಿದ್ದು, ಫಲಿತಾಂಶವು ಸಹ ಮೇ 13 ರಂದೇ ಹೊರಬಿದ್ದಿದೆ.
ಚುನಾವಣಾ ಆಯೋಗ ಮೊನ್ನೆ ಕರ್ನಾಟಕ ವಿಧಾನಸಭೆ ಚುನಾಯಿತ ಶಾಸಕರ ಅಧಿಕೃತ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿತ್ತು. ಈ ಸಂಬಂಧ ಮೊನ್ನೆ ಸೂಚನೆ ಹೊರಡಿಸಲಾಗಿತ್ತು. ಇದೀಗ ಚುನಾವಣಾ ಆಯೋಗ ಮಾದರಿ ನೀತಿ ಸಂಹಿತೆಯನ್ನು ನಿನ್ನೆ ಹಿಂಪಡೆದಿದೆ. ಇಂದು ಚುನಾವಣಾ ನೀತಿ ಸಂಹಿತೆಯನ್ನು ಚುನಾವಣಾ ಆಯೋಗ ವಾಪಸ್ ಪಡೆದಿದೆ. ಈ ನೀತಿ ಸಂಹಿತೆ ಜಾರಿಯಾಗಿನಿಂದ ಇಲ್ಲಿವರೆಗೂ ಕೋಟಿ ಕೋಟಿ ಅಕ್ರಮ ನಗದು, ವಸ್ತು, ಮದ್ಯ ಮುಂತಾದವುಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ವರಿಷ್ಠರಿಂದ ಪ್ರತಿಪಕ್ಷ ನಾಯಕರ ಆಯ್ಕೆ.. ಶೀಘ್ರವೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ: ಪ್ರಹ್ಲಾದ್ ಜೋಶಿ