ಬೆಂಗಳೂರು : ನಿವೇಶನ ಕಬಳಿಕೆಗೆ ಯತ್ನಿಸಿರುವುದಾಗಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಕುಟುಂಬಸ್ಥರ ವಿರುದ್ಧ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಜೆ.ಸಿ.ನಗರ ನಿವಾಸಿ ಶಾಹೀತಾ ನಾಸೀನ್ ಎಂಬುವರು ಜಮೀರ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಶಾಸಕ ಜಮೀರ್ ಅಹಮದ್ ಹಾಗೂ ಅವರ ಸಹೋದರ ಜಮೀಲ್ ಅಹಮದ್ ಅವರು ನಮಗೆ ಮಾರಾಟ ಮಾಡಲಾಗಿದ್ದ ನಿವೇಶನಗಳನ್ನು ಕಬಳಿಸಲು ಯತ್ನಿಸಿದ್ದರು. ಇದನ್ನು ಪ್ರಶ್ನಿಸಿದರೆ ಜಮೀರ್ ಕಡೆಯವರು ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದರು.
ವಾದ-ಪ್ರತಿವಾದ ಆಲಿಸಿದ 7ನೇ ಎಸಿಎಂಎ ನ್ಯಾಯಾಲಯವು ಆರೋಪಿತರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಂಪಿಗೆಹಳ್ಳಿ ಪೊಲೀಸರಿಗೆ ನಿರ್ದೇಶನ ನೀಡಿದೆ. ಇದರ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ದೊಡ್ಮನೆ ಕುಟುಂಬಕ್ಕೆ ಮತ್ತೊಂದು ಆಘಾತ: ಅಶ್ವಿನಿ ಪುನೀತ್ ರಾಜ್ಕುಮಾರ್ ತಂದೆ ನಿಧನ
2015ರಲ್ಲಿ ಚೊಕ್ಕನಹಳ್ಳಿ ಬಡಾವಣೆಯಲ್ಲಿರುವ ನಿವೇಶನವನ್ನು ಶಾಹೀತಾ ನಾಸೀನ್ ಅವರು ಜಮೀರ್ ಕುಟುಂಬಸ್ಥರಿಂದ ಖರೀದಿ ಮಾಡಿದ್ದರು. 2018ರಲ್ಲಿ ಜಮೀರ್ ಕುಟುಂಬಸ್ಥರಿಂದಲೇ ಮತ್ತೊಂದು ಸೈಟ್ ಖರೀದಿಸಿದ್ದರು. ನಿವೇಶನ ಖರೀದಿಸಿ ಕೆಲ ವರ್ಷಗಳಾದರೂ ಸೈಟ್ಗಳ ಕಡೆ ಗಮನ ಹರಿಸಿರಲಿಲ್ಲ.
ಈ ಮಧ್ಯೆ ಮಾರಾಟ ಮಾಡಿದ್ದ ಜಮೀರ್, ಮತ್ತೆ ಇವರಿಂದಲೇ ಸೈಟ್ಗಳನ್ನು ಕಬಳಿಸಲು ಯತ್ನಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ತಮ್ಮ ಕುಟುಂಬಕ್ಕೆ ಶಾಸಕರ ಬೆಂಬಲಿಗರಿಂದ ಜೀವ ಬೆದರಿಕೆ ಹಾಕಿದ್ದರು ಎಂದು ಶಾಹೀತಾ ಆರೋಪಿಸಿದ್ದರು. ಸದ್ಯ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.