ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಸರ್ಕಸ್ ಮಾಡಿದ ನಾಲ್ವರು ವಿದ್ಯಾರ್ಥಿಗಳಿಗೆ ದಂಡ ವಿಧಿಸಲಾಗಿದೆ. ಹಸಿರು ಲೈನ್ ಮೆಟ್ರೋದಲ್ಲಿ ನಿನ್ನೆ ರಾತ್ರಿ ಸುಮಾರು 11 ಗಂಟೆ ವೇಳೆಗೆ ಯಲಚೇನಹಳ್ಳಿಗೆ ಹೋಗುತ್ತಿದ್ದಾಗ ವಿದ್ಯಾರ್ಥಿಗಳು ಹುಚ್ಚಾಟ ನಡೆಸಿದ್ದರು. ಮೆಟ್ರೋದಲ್ಲಿ ಪ್ರಯಾಣಿಸುವ ವೇಳೆ ನಿಲ್ಲುವಾಗ ಹಿಡಿಯುವ ಹ್ಯಾಂಡಲ್‌ಗಳನ್ನು ಬಳಸಿ ಅದರಲ್ಲಿ ಸರ್ಕಸ್ ಮಾಡಿದ್ದರು.
ರೋಲಿಂಗ್ ವ್ಯಾಯಾಮ ಮಾಡಿದ ಮೀತ್ ಪಟೇಲ್ ಹಾಗೂ ಇತರ ಮೂವರು ವಿದ್ಯಾರ್ಥಿಗಳ ವರ್ತನೆಗೆ ಸಹಪ್ರಯಾಣಿಕರು ಆಗಲೇ ಕಿಡಿಕಾರಿದ್ದರು. ಆದರೆ, ವಿದ್ಯಾರ್ಥಿಗಳು ಅದಕ್ಕೆ ಕಿವಿಕೊಡದೇ ಉದ್ಧಟತನ ಮುಂದುವರೆಸಿದ್ದರು. ಪ್ರಯಾಣಿಕರು ಈ ಹುಚ್ಚಾಟದ ವಿಡಿಯೋ ಮಾಡಿ ಯಲಚೇನಹಳ್ಳಿಯ ಮೆಟ್ರೋ ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿಗೆ ನೀಡಿದ್ದರು.
ಯಲಚೇನಹಳ್ಳಿ ಮೆಟ್ರೋ ನಿಲ್ದಾಣದಲ್ಲಿಯೇ ಭದ್ರತಾ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಮೆಟ್ರೋ ಆಸ್ತಿ ದುರ್ಬಳಕೆ ಮಾಡಿದ ವಿದ್ಯಾರ್ಥಿಗಳಿಗೆ 500 ರೂ ದಂಡ ವಿಧಿಸಿ ಮುಂದೆ ಮೆಟ್ರೋದಲ್ಲಿ ಈ ರೀತಿಯ ವರ್ತನೆ ತೋರದಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಕುರಿತು ಆಕ್ಷೇಪಾರ್ಹ ವಿಡಿಯೋ: ವಿದೇಶಿ ಯೂಟ್ಯೂಬರ್ ಮೇಲೆ ಕ್ರಿಮಿನಲ್ ಕೇಸ್- BMRCL
ವಿದೇಶಿ ಯೂಟ್ಯೂಬರ್ ಮೇಲೆ ಕ್ರಿಮಿನಲ್ ಕೇಸ್- BMRCL: ಇತ್ತೀಚೆಗೆ 'ನಮ್ಮ ಮೆಟ್ರೋದಲ್ಲಿ ನಿಯಮ ಉಲ್ಲಂಘಿಸಿ ವಿದೇಶಿ ಯೂಟ್ಯೂಬರ್ ಫಿಡಿಯಾಸ್ ಪನಾಯೊಟ್ ಎಂಬುವವರು ಟಿಕೆಟ್ ಖರೀದಿಸದೇ ಪ್ರಯಾಣಿಸಿರುವ ವಿಡಿಯೋ (ಸೆಪ್ಟೆಂಬರ್ 25-2023) ವೈರಲ್ ಆಗಿತ್ತು. ಈ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ'' ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದರು.
''ಉಚಿತವಾಗಿ ಹೇಗೆ ಪ್ರಯಾಣಿಸುವುದು ಎಂಬುದನ್ನು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ವಿಡಿಯೋ ವೈರಲ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಫಿಡಿಯಾಸ್ ಪನಾಯೊಟೌ ಮೇಲೆ ಬೆಂಗಳೂರು ಮೆಟ್ರೋ ರೈಲು ನಿಗಮ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದೆ'' ಎಂದು ಹೇಳಿದ್ದರು. ಈ ಘಟನೆ ಮರೆಯಾಗುವ ಮುನ್ನವೇ ಹುಡುಗರು ಹುಚ್ಚಾಟ ನಡೆಸಿದ ಪ್ರಕರಣ ವರದಿಯಾಗಿದೆ.
ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು : ಮತ್ತೊಂದು ಪ್ರಕರಣದಲ್ಲಿ ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವಿಸುತ್ತಿದ್ದ ಪ್ರಯಾಣಿಕನ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕರಣ (ಅಕ್ಟೋಬರ್- 6-2023) ದಾಖಲಿಸಿತ್ತು. ರೈಲು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 500 ರೂ. ದಂಡ ವಿಧಿಸಿತ್ತು. ಬಿಎಂಆರ್‌ಸಿಎಲ್ ಈ ರೀತಿಯ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಆಗ ತಿಳಿಸಿದ್ದರು. ಇದೀಗ ಮೆಟ್ರೋ ಆಸ್ತಿ ದುರ್ಬಳಕೆ ಆರೋಪದ ಮೇಲೆ ಯುವಕರಿಗೆ ಬಿಎಂಆರ್‌ಸಿಎಲ್ 500 ರೂ ದಂಡ ವಿಧಿಸಿ ಎಚ್ಚರಿಕೆ ಕೂಡಾ ನೀಡಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವನೆ; ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು