ಬೆಂಗಳೂರು : ಡೆತ್ನೋಟ್ ಬರೆದಿಟ್ಟು ಕಚೇರಿಯಲ್ಲಿಯೇ ಫೈನಾನ್ಸಿಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಜೆ.ಪಿ.ನಗರದ 9ನೇ ಹಂತದ ಅಂಜನಾಪುರದ ನಿವಾಸಿ ರಾಜಣ್ಣ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಪತ್ತೆಯಾದ ಡೆತ್ನೋಟ್ ಅನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಆರು ವರ್ಷಗಳ ಹಿಂದೆ ರಾಜಣ್ಣ ಚೀಟಿ ವ್ಯವಹಾರ ನಡೆಸುತ್ತಿದ್ದರು. ವ್ಯವಹಾರದಲ್ಲಿ ಪರಿಚಿತನಾಗಿದ್ದ ನಿರಂಜನ್ ಎಂಬುವರಿಗೆ ₹8 ಲಕ್ಷ ಹಣ ಕೊಡದೆ ರಾಜಣ್ಣ ಬಾಕಿ ಉಳಿಸಿಕೊಂಡಿದ್ದರು. ಈ ಸಂಬಂಧ ಕೆಲ ದಿನಗಳ ಹಿಂದೆ ನಿರಂಜನ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ರಾಜಣ್ಣನನ್ನು ವಿಚಾರಣೆಗೂ ಒಳಪಡಿಸಿದ್ದರು. ಈ ಮಧ್ಯೆ ಗುಣ ಹಾಗೂ ಮಂಜುನಾಥ್ ಎಂಬುವರು ಬಾಕಿ ಹಣ ತಮಗೂ ನೀಡಬೇಕೆಂದು ಒತ್ತಾಯಿಸಿ ಸಿಸಿಬಿ ಪೊಲೀಸರ ಮೊರೆ ಹೋಗಿದ್ದರು.
ವಾಸ್ತವವಾಗಿ ನಿರಂಜನ್‌ಗೆ ಮಾತ್ರ ಹಣ ಕೊಡಬೇಕಾಗಿತ್ತು. ಆದರೆ, ಗುಣ ಹಾಗೂ ಮಂಜುನಾಥ್ ಇಬ್ಬರು ಸೇರಿಕೊಂಡು ಒಳಸಂಚು ರೂಪಿಸಿದ್ದಾರೆ. ಕಳೆದೊಂದು ವಾರದಿಂದ ಹಣ ನೀಡುವಂತೆ ಒತ್ತಡ ಹೇರಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ವ್ಯಕ್ತಿಯ ಬಾಮೈದ ಶ್ರೀಧರ್ ಆರೋಪಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಜರ್ಮನಿ ಮಾದರಿ ಲಾಕ್‌ಡೌನ್‌ಗೆ ಚಿಂತನೆ: ಹೇಗಿರುತ್ತೆ ಈ ಲಾಕ್‌ಡೌನ್?