ಬೆಂಗಳೂರು : ರಾಜ್ಯದಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುವಂತೆ ಆರ್ಥಿಕ ಇಲಾಖೆ ಸೂಚನೆ ನೀಡಿದೆ. ರಾಜ್ಯದ 220 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ವಿಫಲವಾಗಿದ್ದು, ಬರಗಾಲದ ಛಾಯೆ ವ್ಯಾಪಿಸತೊಡಗಿದೆ. ಹೀಗಾಗಿ ಅನಗತ್ಯ ವೆಚ್ಚಗಳಿಗೆ ಕಟ್ಟುನಿಟ್ಟಾಗಿ ಕಡಿವಾಣ ಹಾಕುವುದು ಅನಿವಾರ್ಯ ಎಂದು ಆರ್ಥಿಕ ಇಲಾಖೆ ಅಭಿಪ್ರಾಯಪಟ್ಟಿದೆ.
ಮುಕ್ತಾಯ ಹಂತದಲ್ಲಿರುವ ಕಾಮಗಾರಿಗಳನ್ನು ಹೊರತುಪಡಿಸಿ ಬೇರೆ ಕಾಮಗಾರಿಗಳಿಗೆ ಹಣ ಬಿಡುಗಡೆ ಸಾಧ್ಯವಿಲ್ಲ ಎಂದು ಸೂಚನೆ ನೀಡಲಾಗಿದೆ. ಯಾವುದೇ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು, ಎಲ್ಲ ಇಲಾಖೆಗಳ ವ್ಯಾಪ್ತಿಯ ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಆರ್ಥಿಕ ಇಲಾಖೆ ಸ್ಪಷ್ಟಪಡಿಸಿದೆ.
ಈ ಹಿಂದಿನ ಸರ್ಕಾರ ಹೆಚ್ಚುವರಿ ಕೈಗೊಂಡ ಕಾಮಗಾರಿಗಳ ಬಾಕಿ ಬಿಲ್ನ ಪ್ರಮಾಣ 27 ಸಾವಿರ ಕೋಟಿ ರೂ ಮೀರಿದೆ. ಅದನ್ನು ಪಾವತಿಸುವುದರೊಂದಿಗೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಅನಿವಾರ್ಯತೆ ಇರುವುದರಿಂದ ಯಾವುದೇ ಹೊಸ ಯೋಜನೆಯ ಹೊರೆ ಬೇಡ ಎಂದು ಸೂಚಿಸಿದೆ ಎನ್ನಲಾಗಿದೆ.
ಸರ್ಕಾರದ ಆರ್ಥಿಕ ಪರಿಸ್ಥಿತಿ ನಿರ್ವಹಿಸುವ ಮಟ್ಟದಲ್ಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಒದಗಿಸುವ ಬಾಬ್ತಿನ ಒಂದರಲ್ಲಿ ಈ ವರ್ಷ 4000 ಕೋಟಿ ರೂ. ಪಾವತಿಸುವ ಅನಿವಾರ್ಯತೆ ಇದೆ. ಹೀಗಾಗಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಕಳೆದ ವರ್ಷದ ಅಕ್ಟೋಬರ್ ಅಂತ್ಯಕ್ಕೆ ಹೋಲಿಸಿದರೆ,ಈ ವರ್ಷದ ಅಕ್ಟೋಬರ್ ಅಂತ್ಯದ ವೇಳೆಗೆ 10000 ಕೋಟಿ ರೂ. ಗಳಷ್ಟು ಹೆಚ್ಚು ತೆರಿಗೆ ಸಂಗ್ರಹ ಮಾಡಲಾಗಿದೆ.
52,760 ಕೋಟಿ ಜಿಎಸ್ ಟಿ ಸಂಗ್ರಹ : ಜಿಎಸ್ ಟಿ ಬಾಬ್ತಿನಲ್ಲಿ ಕಳೆದ ವರ್ಷದ ಅಕ್ಟೋಬರ್ ಅಂತ್ಯಕ್ಕೆ 47 ಸಾವಿರ ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು. ಆದರೆ, ಈ ವರ್ಷ ಅಕ್ಟೋಬರ್ ಅಂತ್ಯದ ವೇಳೆಗೆ 52760 ಕೋಟಿ ರೂಪಾಯಿಗಳಷ್ಟು ಸಂಗ್ರಹವಾಗಿದೆ. ಅಬಕಾರಿಯಲ್ಲಿ ಕಳೆದ ವರ್ಷ ಅಕ್ಟೋಬರ್ ಅಂತ್ಯದ ವೇಳೆಗೆ 17 ಸಾವಿರ ಕೋಟಿ ರೂ. ಸಂಗ್ರಹವಾಗಿದ್ದರೆ, ಈ ವರ್ಷ 19 ಸಾವಿರ ಕೋಟಿ ರೂ ಸಂಗ್ರಹವಾಗಿದೆ.
ಅದೇ ರೀತಿ ಗಣಿ ಬಾಬತ್ತಿನಿಂದ ಕಳೆದ ವರ್ಷ ಅಕ್ಟೋಬರ್ ಅಂತ್ಯದ ಹೊತ್ತಿಗೆ 3000 ಕೋಟಿ ರೂ. ಸಂಗ್ರಹವಾಗಿದ್ದರೆ, ಈ ವರ್ಷ 3900 ಕೋಟಿ ರೂ ಸಂಗ್ರಹವಾಗಿದೆ ಎಂದು ಆರ್ಥಿಕ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.
ಅನಗತ್ಯ ವೆಚ್ಚಕ್ಕೆ ಕಡಿವಾಣ: ಭೂಮಿಯ ಮಾರ್ಗಸೂಚಿ ಮೌಲ್ಯವನ್ನು ಹೆಚ್ಚಿಸುವ ನಿರ್ಧಾರ ಸರ್ಕಾರದ ಅಕ್ಟೋಬರ್ 1 ರಿಂದ ಜಾರಿಗೆ ತಂದಿದ್ದು ಮಾರ್ಚ್ ಅಂತ್ಯದ ವೇಳೆಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ಹಣವನ್ನು ಸಂಗ್ರಹಿಸಬೇಕು ಎಂದು ಗುರಿ ನಿಗದಿ ಮಾಡಲಾಗಿದೆ.
ಹೀಗೆ ಹೆಚ್ಚುವರಿ ಆರ್ಥಿಕ ಮೂಲಗಳನ್ನು ಬಳಸಿಕೊಂಡು ಪರಿಸ್ಥಿತಿಯನ್ನು ತೂಗಿಸುವ ಅನಿವಾರ್ಯತೆ ಇರುವುದರಿಂದ ಸರ್ಕಾರದ ಎಲ್ಲ ಇಲಾಖೆಗಳು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲೇಬೇಕು ಎಂದು ಸೂಚಿಸಲಾಗಿದೆ. ವಿವಿಧ ಯೋಜನೆಗಳಡಿ ಕೇಂದ್ರದಿಂದ ಬರಬೇಕಾದ ಹೊಂದಾಣಿಕೆ ಹಣ ಸಕಾಲಕ್ಕೆ ಪಾವತಿಯಾಗುತ್ತಿದ್ದು, ಜಿಎಸ್ಟಿ ಬಾಕಿಯಲ್ಲೂ ಬಹುತೇಕ ಹಣ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂಓದಿ:ಕೇಂದ್ರದಿಂದ ಸಿಗದ ಬರ ಪರಿಹಾರ; ಬಿಜೆಪಿ ಶಾಸಕರು, ಸಂಸದರ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ