ಬೆಂಗಳೂರು : ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ನಮ್ಮ ಅರ್ಜಿ ವಿಚಾರಣೆ ಸ್ವಲ್ಪ ವಿಳಂಬ ಆಗುತ್ತಿದೆ, ತಡವಾದರೂ ಕಾಯುತ್ತೇವೆ ಆತುರ ಇಲ್ಲ ನಮಗೆ ಗೆಲುವು ಸಿಗಲಿದೆ ಎಂದು ಕೆ.ಆರ್.ಪೇಟೆ ಅನರ್ಹ ಶಾಸಕ ನಾರಾಯಣ ಗೌಡ ಹೇಳಿದ್ದಾರೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿ, ಹೆಚ್ಚಿನ ಅನುದಾನ ನೀಡುವಂತೆ ಅವರು ಮನವಿ ಮಾಡಿದರು.
ಬಳಿಕ ಮಾತನಾಡಿ, ಸುಪ್ರೀಂಕೋರ್ಟ್ ಶೀಘ್ರದಲ್ಲೇ ನಮ್ಮ ಅರ್ಜಿ ವಿಚಾರಣೆಗೆ ಎತ್ತಿಕೊಳ್ಳುವ ನಂಬಿಕೆ ಇದೆ. ಅಯೋಧ್ಯೆ ಪ್ರಕರಣದ ವಿಚಾರಣೆಯಿಂದಾಗಿ ಸ್ವಲ್ಪ ವಿಳಂಬವಾಗಿದೆ, ಆದರೂ ನಮಗೆ ಯಾವುದೇ ಆತುರ ಇಲ್ಲ. ನಾವು ಕಾಯುತ್ತೇವೆ ತೀರ್ಪು ನಮ್ಮ ಪರ ಬರುವ ವಿಶ್ವಾಸ ಇದೆ. ನಾವು ಸ್ವಯಂಪ್ರೇರಿತ ನಿರ್ಧಾರದಿಂದ ರಾಜೀನಾಮೆ ಕೊಟ್ಟಿದ್ದೇವೆ, ಇದರಿಂದ ನಮಗೆ ಯಾವುದೇ ಅಸಮಧಾನ ಆಗಿಲ್ಲ. ಕ್ಷೇತ್ರದ ಸಮಸ್ಯೆಗಳ ಚರ್ಚೆಗೆ ಇಂದು ಸಿಎಂ ಭೇಟಿ ಮಾಡಲು ಬಂದಿದ್ದೇನೆ ಮುಖ್ಯಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ನಡುವಿನ ವಾಗ್ವಾದದ ಬಗ್ಗೆ ಪ್ರತಿಕ್ರಿಯಿಸಿ, ಇಬ್ಬರ ಮೇಲೂ ನನಗೆ ಗೌರವ ಇದೆ. ಅವರಿಬ್ಬರೂ ದೊಡ್ಡವರು, ಅವರ ಬಗ್ಗೆ ಮಾತನಾಡಲು ನಾನು ಚಿಕ್ಕವನು. ಮೈತ್ರಿ ಮುಗಿದ ನಂತರ ಸತ್ಯ ಈಗ ಹೊರಗಡೆ ಬರ್ತಿದೆ, ಏನೇನು ಆಗಿದೆ ಅಂತಾ ಅವರವರೇ ಇವಾಗ ಬಾಯಿ ಬಿಡ್ತಿದ್ದಾರೆ. ನಾವು ಮೈತ್ರಿ ಅವಧಿಯಲ್ಲಿ ಎಷ್ಟೆಲ್ಲ ಕಷ್ಟ ಅನುಭವಿಸಿದ್ದೇವೆ ಎಂದು ಅವರೇ ಮಾತನಾಡ್ತಿದ್ದಾರೆ. 14 ತಿಂಗಳಲ್ಲಿ ನಾವು ಅನುಭವಿಸಿದ ಕಷ್ಟ ಇವರಿಬ್ಬರ ಮಾತಿನಿಂದ ಗೊತ್ತಾಗುತ್ತಿದೆ ಎಂದು ಹೇಳಿದರು.