ಬೆಂಗಳೂರು: ಇಂದು ಕೆಪಿಸಿಸಿ ಕಚೇರಿಯಲ್ಲಿ 15 ಕ್ಷೇತ್ರಗಳ ಆಕಾಂಕ್ಷಿಗಳ ಸಭೆಯನ್ನು ಕರೆಯಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಎಲ್ಲಾ ಕ್ಷೇತ್ರದಲ್ಲೂ ಕನಿಷ್ಠ 3-4 ಆಕಾಂಕ್ಷಿಗಳಿದ್ದಾರೆ. ಈ ಹಿನ್ನೆಲೆ ಇಂದು ಅಂತಿಮವಾಗಿ ಎಲ್ಲರ ಮನವೊಲಿಸಿ ಒಮ್ಮತದ ಒಬ್ಬ ಅಭ್ಯರ್ಥಿಯ ಆಯ್ಕೆ ನಡೆಸಲು ಸಭೆಯಲ್ಲಿ ಪ್ರಯತ್ನ ನಡೆಯಲಿದೆ.
ಈಗಾಗಲೇ 8ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ. 17ರ ಪೈಕಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಜೆಡಿಎಸ್ ಜತೆಗಿನ ಮೈತ್ರಿ ಮುಗಿದ ಹಿನ್ನೆಲೆ ಎಲ್ಲಾ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಹುಣಸೂರು, ಮಹಾಲಕ್ಷ್ಮಿ ಲೇಔಟ್, ಕೆ.ಆರ್. ಪೇಟೆ ಕ್ಷೇತ್ರಗಳ ಪೈಕಿ ಕನಿಷ್ಠ ಎರಡನ್ನಾದರೂ ಗೆಲ್ಲುವ ನಿಟ್ಟಿನಲ್ಲಿ ಶ್ರಮಿಸಲು ಕೈ ನಾಯಕರು ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ತಮ್ಮ ಶಾಸಕರು ಕೈ ಕೊಟ್ಟು ತೆರವಾಗಿರುವ 14ರ ಪೈಕಿ 12 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, 10ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲು ತಂತ್ರಗಾರಿಕೆ ಹೆಣೆಯಲಾಗುತ್ತಿದೆ. ದಿನೇಶ್ ಗುಂಡೂರಾವ್ ಎಲ್ಲಾ 15 ಕ್ಷೇತ್ರ ಗೆಲ್ಲುತ್ತೇವೆ ಎಂದಿದ್ದರೂ ಸಹ ಕನಿಷ್ಠ 10 ಸ್ಥಾನ ಗೆಲ್ಲುವುದು ಕಾಂಗ್ರೆಸ್ ಗುರಿ ಎನ್ನಲಾಗುತ್ತಿದೆ.
ಇಂದು ಬಹುತೇಕ ಒಮ್ಮತದ ಅಭ್ಯರ್ಥಿ ಆಯ್ಕೆ ಆಗಲಿದ್ದು, ಇಂದು ಇಲ್ಲವೇ ಇನ್ನೆರಡು ದಿನದ ಒಳಗೆ ಬಹುತೇಕ ಕ್ಷೇತ್ರದ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲು ತೀರ್ಮಾನಿಸಲಾಗಿದೆ.