ಬೆಂಗಳೂರು: ಕೋವಿಡ್-19 ಮೇಲಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸಾ ದರ ನಿಗದಿ ಬಗ್ಗೆ ನಿರ್ಧಾರ ಆಗಿದೆ. ಈ ಕುರಿತು, ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದರು.
ಟಾಸ್ಕ್ ಫೋರ್ಸ್ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಖಾಸಗಿ ಆಸ್ಪತ್ರೆಗೆ ಹೋದ್ರೆ ಹೆಚ್ಚು ದರ ತಗೆದುಕೊಳ್ತಾರೆ ಎಂಬ ಬಗ್ಗೆ ಚರ್ಚೆ ಆಯ್ತು. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸಾ ದರ ನಿಗದಿ ಬಗ್ಗೆ ಚರ್ಚಿಸಲಾಗಿದ್ದು, ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ ಎಂದರು.
ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಬೇರೆ ಬೇರೆ ದರ ನಿಗದಿ ಪಡಿಸಲಾಗಿದೆ. ಅದನ್ನು ಪರಿಶೀಲಿಸಲಾಗಿದ್ದು, ರಾಜ್ಯಕ್ಕೆ ಪೂರಕವಾದ ದರವನ್ನು ನಿಗದಿ ಪಡಿಸಲಾಗುತ್ತದೆ ಎಂದು ಇದೇ ವೇಳೆ ಹೇಳಿದರು.
ಬಹುತೇಕ ಖಾಸಗಿ ಆಸ್ಪತ್ರೆಗಳು ಸಲ್ಲಿಸಿದ ದರವನ್ನೇ ನಿಗದಿ ಪಡಿಸುವ ಸಾಧ್ಯತೆ ಹೆಚ್ಚಿದೆ. ಟಾಸ್ಕ್ ಫೋರ್ಸ್ ಸಭೆಯಲ್ಲೂ ಈ ಬಗ್ಗೆ ಸಹಮತ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಆಸ್ಪತ್ರೆಗಳ ಒಕ್ಕೂಟ ಜನರಲ್ ವಾರ್ಡ್ ಚಿಕಿತ್ಸೆಗೆ ಪ್ರತಿದಿನ 10,000 ರೂ., ಐಸಿಯು, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಸ್ಪೆಷಲ್ ವಾರ್ಡ್ಗೆ ಪ್ರತಿ ದಿನ 20 ಸಾವಿರ ರೂ., ಐಸೋಲೇಷನ್ ಜೊತೆಗೆ ವೆಂಟಿಲೇಟರ್, ಐಸಿಯು ಚಿಕಿತ್ಸೆಗೆ ಸುಮಾರು 35,000 ರೂ. ದರ ನಿಗದಿಯ ಪ್ರಸ್ತಾಪ ಸಲ್ಲಿಸಿದ್ದಾರೆ. ಇದೇ ದರದ ಆಸುಪಾಸು ಸರ್ಕಾರ ದರ ನಿಗದಿ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಕ್ಯಾಬಿನೆಟ್ನಲ್ಲಿ ತೀರ್ಮಾನ ಆಗಬೇಕಾಗಿರೋದ್ರಿಂದ ನಾನು ದರ ನಿಗದಿ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ಇಂತಿಷ್ಟೇ ದರ ನಿಗದಿ ಆಗಬೇಕು ಅಂತ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಮನವಿ ಮಾಡಿದೆ. ಹೀಗಾಗಿ ಅವರ ಮನವಿ ಪರಿಶೀಲಿಸಿ ಮತ್ತು ಬೇರೆ ರಾಜ್ಯದಲ್ಲಿರುವ ದರ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಡಾಕ್ಟರ್ ಹಾಗೂ ನರ್ಸ್ ಗಳನ್ನು ಶಿಫ್ಟ್ ಮೇಲೆ ಕ್ವಾರಂಟೈನ್ ಮಾಡಲು ತೀರ್ಮಾನ ಮಾಡಲಾಗಿದೆ. ವಾರದ 7 ದಿನ ಕೆಲಸ ಮಾಡಿದ್ರೆ ಮುಂದಿನ 7 ದಿನ ಕ್ವಾರಂಟೈನ್ ಇರಿಸಲು ತೀರ್ಮಾನಿಸಲಾಗಿದೆ ಎಂದರು.
ಸೋಂಕಿತರನ್ನು ಕೋವಿಡ್ ನಿಗಾ ಕೇಂದ್ರದಲ್ಲಿ ಇರಿಸಲು ನಿರ್ಧರಿಸಲಾಗಿದೆ. ಜೊತೆಗೆ ಪ್ರತ್ಯೇಕ ಆ್ಯಪ್ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಆ ಆ್ಯಪ್ನಲ್ಲಿ ಸೋಂಕಿತರ ಎಲ್ಲಾ ಮಾಹಿತಿಯನ್ನು, ರೋಗ ಲಕ್ಷಣದ ವಿವರಗಳನ್ನು ನೋಂದಣಿ ಮಾಡಬೇಕು. ಅದರ ಆಧಾರದಲ್ಲಿ ಅವರನ್ನು ಆಸ್ಪತ್ರೆಗೆ ಕಳುಹಿಸಬೇಕಾ, ಐಸಿಯುಗೆ ಕಳುಹಿಸಬೇಕಾ ಎಂಬ ಬಗ್ಗೆ ನಿರ್ಧರಿಸಲಾಗುತ್ತದೆ ಎಂದರು.