ಬೆಂಗಳೂರು : ರಾಜ್ಯದಲ್ಲಿ ಮತ್ತೆ ಕಬ್ಬಿಣ ಮೈನಿಂಗ್ ಮಾಡಲು ಅವಕಾಶ ನೀಡಿ, ಇದರಿಂದ ಉದ್ಯೋಗಾವಕಾಶದ ಜೊತೆಗೆ ಬೊಕ್ಕಸಕ್ಕೆ ಆದಾಯ ಕೂಡ ಬರಲಿದೆ ಎಂದು ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟ ಆಗ್ರಹಿಸಿದೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಎಫ್‍ಐಎಂಐ ದಕ್ಷಿಣ ವಲಯ ಅಧ್ಯಕ್ಷ ಸಂತೇಶ್ ಗುರೆಡ್ಡಿ, ಕರ್ನಾಟಕ ರಾಜ್ಯದಲ್ಲಿ ಕಬ್ಬಿಣದ ಅದಿರು ವ್ಯಾಪಾರಕ್ಕೆ ಸೂಚಿಸಲಾದ ನಿರ್ಬಂಧಗಳನ್ನು ತೆಗೆದುಹಾಕುವಲ್ಲಿ ಭಾರತೀಯ ಖನಿಜ ಕೈಗಾರಿಕೆಗಳ ಒಕ್ಕೂಟ (ಎಫ್‍ಐಎಂಐ)ದ ದಕ್ಷಿಣ ವಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯ ಪ್ರವೇಶಕ್ಕೆ ಆಗ್ರಹ ಮಾಡುತ್ತಿದೆ. ಕರ್ನಾಟಕವು ಗಣಿ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯ ಹೊಂದಿರದ ಭಾರತದ ಏಕೈಕ ರಾಜ್ಯ. ಇಲ್ಲಿ ಆಂತರಿಕ ಬಳಕೆದಾರರಿಗೆ ಕಬ್ಬಿಣದ ಅದಿರನ್ನು ಸಾಂಸ್ಥಿಕ ಇ-ಹರಾಜು ಮೂಲಕ ಮಾರಾಟ ಮಾಡುವುದೇ ಅರ್ಹತೆಯ ಮಾನದಂಡವಾಗಿದೆ. ಕಬ್ಬಿಣದ ಅದಿರು ಮತ್ತು ಉಂಡೆಗಳ ರಫ್ತು ನಿರ್ಬಂಧವಿರುವ ಏಕೈಕ ರಾಜ್ಯ ಕರ್ನಾಟಕ ಎಂದರು.
ಓದಿ : ಗೋಪಾಲಸ್ವಾಮಿ ಬೆಟ್ಟದ ಕಾಡಿನಲ್ಲಿ ಚೆಕ್ ಡ್ಯಾಂ ಉದ್ಘಾಟಿಸಿದ ನಟ ದರ್ಶನ್
ಇ-ಹರಾಜಿನಿಂದಲೇ ಅದಿರಿನ ಸಂಪೂರ್ಣ ಮೂಲವನ್ನು ಪಡೆಯಲು ಅರ್ಹ ಖರೀದಿದಾರರಿಗೆ ಯಾವುದೇ ನಿಬಂಧನೆಗಳಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ 45 ಮಿಲ್ ಟನ್ ದಾಸ್ತಾನು ಲಭ್ಯವಿದ್ದರೂ, 36 ಮಿಲ್ ಟನ್ ಪೂರೈಕೆಯಾಗಿದೆ. ಕರ್ನಾಟಕದಲ್ಲಿ ಅದಿರಿನ ಸಮರ್ಪಕ ಪೂರೈಕೆ ಇದ್ದರೂ ಕೂಡ, ಪ್ರತಿ ವರ್ಷ ಇತರ ರಾಜ್ಯಗಳಿಂದ ಮತ್ತು ವಿದೇಶಗಳಿಂದ ನಿಯಮಿತವಾಗಿ ಮತ್ತು ಗಣನೀಯ ಪ್ರಮಾಣದಲ್ಲಿ ಅದಿರು ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಸಮತೋಲನವನ್ನು ತಗ್ಗಿಸಿ ಕಬ್ಬಿಣದ ಅದಿರು ಉದ್ಯಮವನ್ನು ದುರ್ಬಲ ಸ್ಥಿತಿಗೆ ತಳ್ಳುತ್ತದೆ. ವ್ಯಾಪಾರ ನಿರ್ಬಂಧದ ದೃಷ್ಟಿಯಿಂದ ಗಣಿಗಾರರು ದೇಶೀಯವಾಗಿ ಮಾತ್ರ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದಾದ ಕಾರಣ, ಯಾವುದೇ ಪರ್ಯಾಯ ಮಾರುಕಟ್ಟೆ ಇಲ್ಲದೆ ಕರ್ನಾಟಕದಲ್ಲಿ ಬೆಲೆ ಬಹಳ ಕಡಿಮೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 140 ಡಾಲರ್ ಬೆಲೆ ಇದ್ದರೂ, ಕರ್ನಾಟಕ ಕಬ್ಬಿಣದ ಅದಿರನ್ನು 50 ಡಾಲರ್ಗೆ ಮಾರಾಟ ಮಾಡುತ್ತಿದೆ ಎಂದು ಹೇಳಿದರು.