ಬೆಂಗಳೂರು: 'ಸಾಲ್ಟ್ ಪೆಪ್ಪರ್' ಚಿತ್ರದ ನಿರ್ಮಾಪಕ ಬೇರೆಯವರ ಮನೆಯನ್ನು ಲೀಸ್ಗೆ ಕೊಡುವ ನೆಪದಲ್ಲಿ ಹಣ ತೆಗೆದುಕೊಂಡು ಎಸ್ಕೇಪ್ ಆಗಿದ್ದ. ಇದೀಗ ಆತನನ್ನು ಪೊಲೀಸರು ಪತ್ತೆ ಹಚ್ಚಿದ್ದು, ವಿಚಾರಣೆ ನಡೆಸಿದ್ದಾರೆ. ಆದರೆ ಮನೆ ಖರೀದಿಗೆ ಕೊಟ್ಟ ಹಣವನ್ನು ಪಡೆಯಲು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಲಯಾಳಂ ಸಿನಿಮಾ ನಿರ್ಮಾಪಕ ಸದಾನಂದ್ ರಂಗೋರಥ್ ಎಂಬಾತ ವಂಚನೆ ಮಾಡಿದ ಆರೋಪಿ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಆಟೋ ಚಾಲಕ ಕಷ್ಟಪಟ್ಟು ದುಡಿದ ಹಣದಲ್ಲಿ ಮನೆಯನ್ನು ಲೀಸ್ಗೆ ಪಡೆದುಕೊಂಡಿದ್ದರು. ಆದರೆ ಆರೋಪಿ ಮನೆಯನ್ನೂ ಕೊಡದೆ, ಹಣವನ್ನೂ ನೀಡದೆ ಪರಾರಿಯಾಗಿದ್ದ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಹೀಗೆಯೇ ಸುಮಾರು 60ಕ್ಕೂ ಹೆಚ್ಚು ಜನರಿಗೆ ಆರೋಪಿ ಸದಾನಂದ್ ವಂಚನೆ ಮಾಡಿದ್ದಾನೆ ಎಂದು ತನಿಖೆ ವೇಳೆ ಬಹಿರಂಗವಾಗಿತ್ತು. ಅಷ್ಟೇ ಅಲ್ಲದೆ ಈ ಕೆಲಸಕ್ಕೆ ಹೀರಾರಾಣಿ ಎಂಬಾಕೆಯನ್ನು ಬಳಸಿಕೊಂಡಿದ್ದಾನಂತೆ. ಆರೋಪಿಯ ವಿರುದ್ಧ ದೂರು ದಾಖಲಾಗ್ತಿದ್ದಂತೆ ಪೊಲೀಸರು ಕೇರಳಕ್ಕೆ ತೆರಳಿ ಆರೋಪಿಯನ್ನ ಬಂಧಿಸಿ ಕರೆತಂದಿದ್ದಾರೆ. ಸದ್ಯ ಆರೋಪಿ ಬಳಿಯಿಂದ ಹಣ ಕೊಡಿಸಿ ಎಂದು ಠಾಣೆ ಮುಂಭಾಗ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.