ಬೆಂಗಳೂರು: ಗುರುವಾರದಂದು ಮಕ್ಕಳ ದಿನಾಚರಣೆ ಅಂಗವಾಗಿ ನಗರದ ಕೆ.ಎಲ್.ಇ ಸೊಸೈಟಿ ಶಾಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಡೆಲ್ ಸಂಸ್ಥೆಯು ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಿತ್ತು.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಈ ಫಿಲ್ಮ್ ವೆಸ್ಟಿವಲ್ ಉದ್ಘಾಟಿಸಿ, ಮುಂದಿನ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ವಾರದ ಒಂದು ದಿನ ಬ್ಯಾಗ್ ಲೆಸ್ ಡೇ (ಬ್ಯಾಗ್ ರಹಿತ ದಿನ) ಮಾಡಲಾಗುವುದೆಂದರು. ಇನ್ನು ಈ ಮಕ್ಕಳ ಚಲನಚೊತ್ರೋತ್ಸವದಲ್ಲಿ ಸುಮಾರು ನೂರು ಪ್ರಶಸ್ತಿ ವಿಜೇತ ಅತ್ಯುತ್ತಮ ಚಿತ್ರಗಳನ್ನು ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮಕ್ಕಳೆದುರು ಪ್ರದರ್ಶಿಸಲು ಉದ್ದೇಶಿಸಲಾಗಿದೆ.
ದೇಶಾದ್ಯಂತ ಒಂಭತ್ತು ಸಾವಿರ ಮಕ್ಕಳಿಗೆ ಈ ಚಿತ್ರೋತ್ಸವದ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ಏಳು ಸಾವಿರ ಸರ್ಕಾರಿ ವಿದ್ಯಾರ್ಥಿಗಳಿದ್ದಾರೆ. ಅತ್ಯುತ್ತಮ ಸಿನಿಮಾಗಳನ್ನು ನೋಡಿ ಆನಂದಿಸುವುದಷ್ಟೇ ಅಲ್ಲದೆ ಕಲಿಯಬೇಕಾದ ಅನೇಕ ಮೌಲ್ಯ ತತ್ವಗಳು ತಿಳಿಸುವಂತಹ ಚಲನಚಿತ್ರಗಳ ಪ್ರದರ್ಶನವಿರಲಿದೆ. ಅಷ್ಟೇ ಅಲ್ಲದೆ, ಬಳಿಕ ಮಕ್ಕಳಿಗೆ ಫಿಲ್ಮ್ ಮೇಕಿಂಗ್ ಸ್ಪರ್ಧೆಯಲ್ಲೂ ಭಾಗವಹಿಸುವ ಅವಕಾಶವಿದ್ದು, 40 ದೇಶಗಳ ಮಕ್ಕಳು ಭಾಗವಹಿಸಲಿದ್ದಾರೆ.