ಬೆಂಗಳೂರು: ಫಿಲ್ಮ್ ಸಿಟಿ ಆಗೋದು ಮುಖ್ಯವೇ ಹೊರತು ಯಾವ ಸ್ಥಳದಲ್ಲಿ ಆಗಬೇಕೆಂಬುದು ಮುಖ್ಯವಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಏಪ್ರಿಲ್ನಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯೆ ಜಯಮಾಲಾ, ಚಿತ್ರನಗರಿ ಬಗ್ಗೆ ಪ್ರಸ್ತಾಪಿಸಿ ಮೈಸೂರಿನ ಹಿಮ್ಮಾವು ಗ್ರಾಮದ ಬಳಿ 108.8 ಎಕರೆಯಲ್ಲಿ ಪಿಪಿಪಿ ಮಾದರಿಯಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಯೋಚಿಸಲಾಗಿತ್ತು. ಆದರೆ, ಈಗ 500 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣಕ್ಕೆ ಮೀಸಲಿಡಲಾಗಿದೆ ಎಂದರು.
ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಸಂದೇಶ ನಾಗರಾಜ್ ಹಿಂದಿನ ಸರ್ಕಾರಗಳ ವೇಳೆ ಫಿಲ್ಮ್ ಸಿಟಿ ಹೆಸರು ಘಟ್ಟ, ಮೈಸೂರು, ರಾಮನಗರ ಅಂದರು. ಆದರೆ ಹಣ ಯಾರೂ ಇಟ್ಟಿರಲಿಲ್ಲ. ನೀವು 500 ಕೋಟಿ ರೂ. ಮೀಸಲಿಟ್ಟಿರುವುದಕ್ಕೆ ಧನ್ಯವಾದ. ಆದರೆ, ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಿಸಿದರೆ ಅನುಕೂಲ ಎಂದರು.
ಇದಕ್ಕೆ ಉತ್ತರಿಸಿದ ಸಿಎಂ ಯಡಿಯೂರಪ್ಪ, ಮೊದಲ ಬಾರಿ 500 ಕೋಟಿ ರೂ. ಮೀಸಲಿಟ್ಟಿದ್ದು 150 ಎಕರೆ ಜಾಗವನ್ನು ಬೆಂಗಳೂರಿನಲ್ಲಿ ಗುರುತಿಸಲಾಗಿದೆ. ಏಪ್ರಿಲ್ನಲ್ಲಿ ನಿಮ್ಮನ್ನೆಲ್ಲಾ ಕರೆದೊಯ್ಯಲಿದ್ದೇನೆ ವೀಕ್ಷಿಸಿ, ನಿಮ್ಮ ಅಭಿಪ್ರಾಯ ಹೇಳಿ. ಈ ವರ್ಷದಲ್ಲೇ ಕೆಲಸ ಆರಂಭಿಸಲಾಗುತ್ತದೆ ಎಂದರು. ಈ ವೇಳೆ ಮತ್ತೆ ಮತ್ತೆ ಮೈಸೂರು ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ಅಸಮಧಾನಗೊಂಡ ಸಿಎಂ, ಮತ್ತೆ ಮೈಸೂರು, ರಾಮನಗರ ಅಂತ ಚರ್ಚೆ ಮಾಡಬೇಡಿ. ನಿಮಗೆ ಫಿಲ್ಮ್ ಸಿಟಿ ಬೇಕು ಅಂದರೆ ಈ ವಿಷಯ ಮಾತನಾಡಬೇಡ, ಬೆಂಗಳೂರಿನಲ್ಲಿ ಅಂತಾ ಈಗಾಗಲೇ ನಿರ್ಧಾರ ಮಾಡಲಾಗಿದೆ. ಮೈಸೂರಾದರೇನು? ಬೆಂಗಳೂರಾದರೇನು ಎಂದು ಫಿಲ್ಮ್ ಸಿಟಿ ನಿರ್ಮಾಣ ಸ್ಥಳಾಂತರ ಇಲ್ಲವೆಂದು ಸ್ಪಷ್ಟಪಡಿಸಿದರು.
ಆರನೇ ವೇತನ ಆಯೋಗ ವರದಿಯ ಎರಡನೇ ಸಂಪುಟ ಅನುಷ್ಠಾನ ಸಂಬಂಧ ಹೆಚ್ಚುವರಿ ಮುಖ್ಯಕಾರ್ಯದರ್ಶಿ ನೇತೃತ್ವದ ಸಮಿತಿ ರಚಿಸಿ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸದನಕ್ಕೆ ಮಾಹಿತಿ ನೀಡಿದ್ದಾರೆ. ಇನ್ನು ಮೀನುಗಾರಿಕಾ ಇಲಾಖೆಯಲ್ಲಿನ 26 ಹುದ್ದೆಗಳನ್ನು ಹೆಚ್ಚುವರಿ ನಿರ್ದೇಶಕ ಹುದ್ದೆಗೆ ಬಡ್ತಿ ಕೊಡಲಾಗುತ್ತದೆ. ಈ ಸಂಬಂಧ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪ್ರತಿದಿನ ರೈತರ ಪಂಪ್ಸೆಟ್ಗಳಿಗೆ ಏಳು ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಸಿಎಂ ಬಿಎಸ್ವೈ ವಿಧಾನ ಪರಿಷತ್ಗೆ ತಿಳಿಸಿದ್ದಾರೆ. ಸದಸ್ಯ ಮಾನೆ ಶ್ರೀನಿವಾಸ್ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈಗಾಗಲೇ ಏಳು ಗಂಟೆ ವಿದ್ಯುತ್ ಕೊಡುತ್ತಿದ್ದೇವೆ, ಕೆಲ ಕಡೆ ನಿರಂತರ ಪೂರೈಕೆ ಮಾಡುತ್ತಿದ್ದು ಮತ್ತೆ ಕೆಲವು ಕಡೆ ಬೆಳಗ್ಗೆ ಹಾಗೂ ರಾತ್ರಿ ಹಂಚಿಕೆ ಮಾಡಲಾಗಿದೆ. ಆದ್ರೆ 122 ಕಡೆ ಸಮಸ್ಯೆ ಇದ್ದು, ಅದನ್ನು ಸರಿಪಡಿಸಲಿದ್ದೇವೆ. ತಾಂತ್ರಿಕ ತೊಂದರೆಯಿಂದ ನಿರಂತರ ವಿದ್ಯುತ್ ಕೊಡಲು ಸಾಧ್ಯವಾಗುತ್ತಿಲ್ಲ, ಬರುವ ದಿನದಲ್ಲಿ ಸುಧಾರಣೆ ಮಾಡಲಿದ್ದೇವೆ. ವಿದ್ಯುತ್ಅನ್ನು ಸಮರ್ಪಕವಾಗಿ ಕೊಡುವ ಅಪೇಕ್ಷೆ ನಮ್ಮದೂ ಇದೆ ಎಂದರು.
ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಸದಸ್ಯ ಸುನೀಲ್ ಗೌಡ, ವಿಜಯಪುರದಲ್ಲಿ ಗುತ್ತಿಗೆದಾರರು ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಬಿಟ್ಟು ಹೋಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈಗಾಗಲೇ 723 ಎಕರೆ ಜಮೀನು ಖರೀದಿ ಮಾಡಲಾಗಿದೆ. ಗುತ್ತಿಗೆದಾರ ಬಿಟ್ಟು ಹೋದ, ಹೋಗಲಿ. ಆದರೆ ಅಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಕುರಿತು ನಮಗೆ ಆಸಕ್ತಿ ಇದೆ. ಈಗ ಅಲ್ಲಿ ನೆಲ ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ಸಾಧ್ಯವಾದಷ್ಟು ಬೇಗ ನಿಲ್ದಾಣ ಮಾಡಲು ಮುಂದಾಗಲಿದ್ದೇವೆ ಎಂದು ಭರವಸೆ ನೀಡಿದ್ರು.