ಬೆಂಗಳೂರು : ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ತಿ ತಯಾರಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಸಚಿವ ಈಶ್ವರ ಖಂಡ್ರೆ ಸೂಚಿಸಿದರು. ಮುಂಬರುವ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪರಿಸರಸ್ನೇಹಿ ಗಣಪತಿ ಹಬ್ಬದ ಆಚರಣೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಚಿವರು ತಮ್ಮ ಕಚೇರಿಯಲ್ಲಿ ಮಂಗಳವಾರ, ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ರಾಸಾಯನಿಕಲೇಪಿತ ಪಿಒಪಿ ಗಣಪತಿ ತಯಾರಕರಿಗೆ ಮಂಡಳಿ ನೊಟೀಸ್ ನೀಡಿದ್ದರೂ ಅವರು ಮತ್ತೆ ತಯಾರಿಕೆಯಲ್ಲಿ ತೊಡಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ ಎಂದರು.
ನೀರಿನಲ್ಲಿ ಕರಗದ ಪಿಒಪಿ ಮೂರ್ತಿಗಳು ಜಲಮೂಲಗಳಿಗೆ ಅಪಾಯಕಾರಿ. ಇಂತಹ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ನಿಮಜ್ಜನೆಯನ್ನು ಸಂಪೂರ್ಣವಾಗಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಪ್ರಕೃತಿ ಮತ್ತು ಪರಿಸರ ಉಳಿಸಬೇಕಾದದ್ದು ನಮ್ಮೆಲ್ಲರ ಹೊಣೆ. ಜಲಮೂಲಗಳಿಗೆ ಹಾನಿ ಉಂಟು ಮಾಡುವ ಭಾರ ಲೋಹ ಮತ್ತು ರಾಸಾಯನಿಕ ಬಣ್ಣಲೇಪಿತ ಪಿಒಪಿ ವಿಗ್ರಹಗಳ ತಯಾರಿಕೆ, ದಾಸ್ತಾನು, ಮಾರಾಟ ಮತ್ತು ನಿಮಜ್ಜನೆಯನ್ನು ತಡೆಯಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ 2020ರ ಮೇ 12ರಂದು ಮಾರ್ಗಸೂಚಿ ಹೊರಡಿಸಿದೆ. ಅದಕ್ಕನುಗುಣವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೂ ಕೂಡ 21-08-2023ರಂದು ಸುತ್ತೋಲೆ ಹೊರಡಿಸಿ ಪಿಒಪಿ ಮತ್ತು ಭಾರ ಲೋಹ ಮಿಶ್ರಿತ ರಾಸಾಯನಿಕ ಬಣ್ಣ ಲೇಪಿತ ವಿಗ್ರಹಗಳ ತಯಾರಿಕೆ, ಮಾರಾಟ, ಸಾಗಾಟ ಮತ್ತು ನಿಮಜ್ಜನೆೆಯನ್ನು ನಿಷೇಧಿಸಿದೆ. ಈಗ ಇದರ ಕಟ್ಟುನಿಟ್ಟಿನ ಪಾಲನೆ ಆಗಬೇಕು ಎಂದು ತಾಕೀತು ಮಾಡಿದರು.
ಜಲ ಕಾಯ್ದೆ, ವಾಯು ಕಾಯ್ದೆ ಮತ್ತು ಪರಿಸರ ಸಂರಕ್ಷಣಾ ಕಾಯ್ದೆ-1986ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಮಂಡಳಿಯ ನೊಟೀಸ್ಗೂ ಹೆದರದೆ, ಬೀಗಮುದ್ರೆ ಹಾಕಿದ್ದರೂ ಹಿಂಬಾಗಿಲಿನಿಂದ ಪಿಒಪಿ ಗಣೇಶ ತಯಾರಿಕೆ, ಸಾಗಣೆ, ದಾಸ್ತಾನು ಮತ್ತು ಮಾರಾಟದಲ್ಲಿ ತೊಡಗಿರುವ ತಯಾರಕರ ವಿರುದ್ಧ ಯಾವುದೇ ಒತ್ತಡಕ್ಕೆ ಮಣಿಯದೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ನಿರ್ದೇಶನ ನೀಡಿದ್ದಾರೆ.
ಇದನ್ನೂ ಓದಿ : ನಿಷೇಧವಿದ್ದರೂ ಬೆಳಗಾವಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಒಪಿ ಗಣಪತಿ ಮೂರ್ತಿಗಳು.. ಪರಿಸರ ಪ್ರೇಮಿಗಳ ಆತಂಕ..
ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಸಮುದಾಯ ಆರೋಗ್ಯ ರಕ್ಷಣೆಗೆ ಪಿಒಪಿ ಗಣೇಶ ಮಾರಾಟ, ತಯಾರಿಕೆ, ನಿಮಜ್ಜನೆ ನಿಷೇಧಿಸುವುದು ಅನಿವಾರ್ಯ. ಕೂಡಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ರಾಜ್ಯಾದ್ಯಂತ ಪಿಒಪಿ ಗಣೇಶ ಮಾರಾಟ ನಿರ್ಬಂಧಿಸುವಂತೆ ಸಚಿವ ಖಂಡ್ರೆ ಆದೇಶಿಸಿದರು.
ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆಯಿಟ್ಟ ಪಿಒಪಿ ಮೂರ್ತಿಗಳು.. ಧಾರವಾಡದಲ್ಲಿ ಅಧಿಕಾರಿಗಳಿಂದ ದಾಳಿ