ಬೆಂಗಳೂರು: ಚುನಾವಣಾ ಆಯೋಗ ಮತ್ತು ಕೋರ್ಟ್ ಸೂಚನೆ ನೀಡಿದ್ರು ಕೂಡ ಪೊಲೀಸರು ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು ಮಾಡ್ತಿಲ್ಲ. ಚುನಾವಣಾ ಅಕ್ರಮದಲ್ಲಿ ಪಾಲ್ಗೊಂಡಿರುವ ಮುನಿರತ್ನ ವಿರುದ್ಧ ಕೂಡಲೇ ಪೊಲೀಸರು ಎಫ್ಐಆರ್ ದಾಖಲಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಚಿವ ಹೆಚ್.ಎಂ.ರೇವಣ್ಣ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅ. 20ರಂದು ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ಮುನಿರತ್ನ ಮತ್ತು ಬೆಂಬಲಿಗರು ಚುನಾವಣಾ ಅಕ್ರಮ ಮಾಡುತ್ತಿರುವುದಾಗಿ ದೂರು ನೀಡಿದ್ದೆವು. ಅತ್ತ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲು ಮಾಡಲು ಕೋರ್ಟ್ ಸೂಚನೆ ನೀಡಿದೆ. ಆದರೆ ಇನ್ನೂ ಎಫ್ಐಆರ್ ದಾಖಲಿಸಿಲ್ಲ ಎಂದು ಕಿಡಿಕಾರಿದರು.
ಮುನಿರತ್ನ ಆಪರೇಷನ್ ಕಮಲದ ಮೂಲಕ ತಮ್ಮನ್ನು ತಾವು ಮಾರಿಕೊಂಡವರು. ಈಗ ಆಪರೇಷನ್ ಕಮಲದ ಹಣವನ್ನು ಚುನಾವಣಾ ಅಕ್ರಮದಲ್ಲಿ ಬಳಸುತ್ತಿದ್ದಾರೆ. ಮುನಿರತ್ನ ತಮ್ಮ ಹಳೇ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ. ಸೆಕ್ಷನ್ 77ರ ಪ್ರಕಾರ ಚುನಾವಣಾ ವೆಚ್ಚ 30 ಲಕ್ಷ ಮಾತ್ರ. ಆದ್ರೆ ಮುನಿರತ್ನ ಕೋಟ್ಯಂತರ ರೂಪಾಯಿ ಅಕ್ರಮ ಹಣ ಸುರಿಯುತ್ತಿದ್ದಾರೆ ಎಂದು ಆರೋಪಿಸಿದರು.