ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳಾದರೂ ಆಡಳಿತದಲ್ಲಿ ಸುಧಾರಣೆ ಆಗುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಈ ಸರ್ಕಾರ ಅಧಿಕಾರ ಕಳೆದುಕೊಂಡು ಮನೆಗೆ ಹೋಗುವವರೆಗೂ ಹೋರಾಟ ಮಾಡುತ್ತೇವೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಹೋರಾಟ ಪ್ರಾರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ.
ರಾಜ್ಯ ಸರ್ಕಾರದ ವೈಫಲ್ಯಗಳನ್ನು ವಿರೋಧಿಸಿ ನಗರದ ಫ್ರೀಡಂ ಪಾರ್ಕ್ನಲ್ಲಿ ಬಿಜೆಪಿ ಆಯೋಜನೆ ಮಾಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ನೂರು ದಿನಗಳಿಂದ ಆಡಳಿತದಲ್ಲಿ ಸುಧಾರಣೆ ಆಗಬಹುದಾ ಎಂದು ಕಾದು ನೋಡಿದ್ದೆವು. ಆದರೆ ಆಗಲಿಲ್ಲ. ಹಾಗಾಗಿ ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು, ಇದೇ 15 ಅಥವಾ 16 ರಂದು ಕುರುಡುಮಲೆ ವಿನಾಯಕ ದರ್ಶನ ಪಡೆದು ಸರ್ಕಾರದ ವಿರುದ್ಧ ಜನ ಜಾಗೃತಿ ಮೂಡಿಸಲು ಪ್ರವಾಸ ಆರಂಭಿಸುತ್ತೇನೆ. ಈ ಭ್ರಷ್ಟ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದೆ. ಈ ಸರ್ಕಾರದ ವಿರುದ್ಧ ಹೋರಾಟ ಪ್ರಾರಂಭವಾಗಿದೆ ಎಂದರು.
ಕಾವೇರಿ ಪ್ರಾಧಿಕಾರಕ್ಕೂ ಬರ ಪರಿಸ್ಥಿತಿ ತಿಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಹಾಗಾಗಿ ಕಾವೇರಿ ಹೋರಾಟ ತೀವ್ರಗೊಳಿಸುತ್ತೇವೆ. ಕುಡಿಯುವ ನೀರು ಸಿಗುತ್ತಿಲ್ಲ. ಬರ ಪೀಡಿತ ತಾಲೂಕು ಘೋಷಣೆಗೆ ವಿಳಂಬ ಮಾಡುತ್ತಿದೆ. ವಿದ್ಯುತ್ ದರ ಏಕಾಏಕಿ ಡಬಲ್ ಮಾಡಿದೆ. ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ. ಇದೆಲ್ಲವನ್ನೂ ಖಂಡಿಸಿ ಇದೇ 15 ಅಥವಾ 16ನೇ ತಾರೀಖು ಕುರುಡುಮಲೆಯಿಂದ ಪ್ರವಾಸ ಆರಂಭಿಸುತ್ತೇನೆ. ಈ ಸರ್ಕಾರ ಅಧಿಕಾರ ಕಳೆದುಕೊಂಡು ಮನೆಗೆ ಹೋಗುವವರೆಗೂ ಹೋರಾಟ ಮಾಡುತ್ತೇವೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಹೋರಾಟ ಪ್ರಾರಂಭಿಸಲಾಗುತ್ತದೆ ಎಂದು ಪ್ರಕಟಿಸಿದರು.
ನಂತರ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಗ್ಯಾರಂಟಿಗಳ ಹೆಸರಲ್ಲಿ ದೋಖಾ, ವರ್ಗಾವಣೆ ದಂಧೆಯಲ್ಲಿ ಅಧಿಕಾರಿಗಳ ಹರಾಜು ನಡೆಯುತ್ತಿದೆ ಎಂದು ಆರೋಪಿಸಿದರು. ನಮ್ಮ ಸರ್ವೋಚ್ಛ ನಾಯಕ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ರಣಕಹಳೆ ಊದಿದ್ದೇವೆ. ಇದನ್ನು ಮುಂದಿನ ಒಂದು ವರ್ಷ ರಾಜ್ಯದ ಎಲ್ಲ ಮನೆಗಳಿಗೂ ತಲುಪಿಸಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಹೋರಾಟ ಆರಂಭಿಸಿದ್ದೇವೆ ಎಂದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ನವರು, ಗ್ಯಾರಂಟಿಗಳ ಹೆಸರಿನಲ್ಲಿ ಸಹಿ ಮಾಡಿ ಕೊಟ್ಟರು. ಆದರೆ, ಈಗ ಯಾವುದೂ ಸಮರ್ಪಕವಾಗಿ ಜಾರಿ ಮಾಡಿಲ್ಲ. ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಇವರು ಕೊಡುತ್ತಿರುವ ಐದು ಕೆಜಿ ಅಕ್ಕಿ ನರೇಂದ್ರ ಮೋದಿ ಕೊಡುತ್ತಿರುವ ಅಕ್ಕಿ. ಅಕ್ಕಿ ಬದಲು ಹಣ ಕೊಡುತ್ತೇವೆ ಅಂತ ಹೇಳಿ, ಗ್ರಾಮೀಣ ಮಹಿಳೆಯ ಅರ್ಧ ದಿನದ ಕೂಲಿಯಷ್ಟು ಹಣ ಕೊಡುತ್ತಿಲ್ಲ. ಅನ್ನಭಾಗ್ಯದಲ್ಲಿ ದ್ರೋಹ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನವೆಂಬರ್ಗೆ ರಾಜ್ಯ ಕತ್ತಲೆ : ರಾಜ್ಯದಲ್ಲಿ 200 ಯುನಿಟ್ ಫ್ರೀ ಕರೆಂಟ್ ಕೊಡುವುದಾಗಿ ಹೇಳಿ ಈಗ ರಾಜ್ಯದಲ್ಲಿ ಕರೆಂಟ್ ಸಿಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಜೀರೊ ಕರೆಂಟ್ ಜೀರೊ ಬಿಲ್ ಯೋಜನೆ ಜಾರಿಗೆ ಬರುತ್ತದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗಿದೆ. ನವೆಂಬರ್ನಿಂದ ರಾಜ್ಯದಲ್ಲಿ ಕತ್ತಲೆ ಆವರಿಸುತ್ತದೆ ಎಂದರು.
ಅಧಿಕಾರಿಗಳ ಹರಾಜು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೂರು ತಿಂಗಳಲ್ಲಿ ಭ್ರಷ್ಟಾಚಾರ ಜೋರಾಗಿದೆ. ಅಧಿಕಾರಿಗಳ ಹುದ್ದೆ ಹರಾಜು ಆಗುತ್ತಿವೆ. ವಿಧಾನಸೌಧ, ಕುಮಾರಕೃಪಾದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರೇ ಹೇಳುತ್ತಿದ್ದಾರೆ. ಬೆಂಗಳೂರಿನ ಹೊರ ವಲಯದ ಅಧಿಕಾರಿ ವರ್ಗಾವಣೆಗೆ 8 ಕೊಟ್ಟವನು ಬಿಟ್ಟು ಹೋದ ಮೇಲೆ ಅದೇ ಹುದ್ದೆಗೆ 13 ಕೋಟಿಗೆ ಹರಾಜಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಕಾರ್ಯಕರ್ತರನ್ನು ಸಣ್ಣ ಪುಟ್ಟ ವಿಷಯಗಳಿಗೆ ಬಂಧನ ಮಾಡುತ್ತಿದ್ದಾರೆ. ಹಾಸನದ ಕಾರ್ಯಕರ್ತರನ್ನು ಬೆಂಗಳೂರಿಗೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳು ಕಾನೂನು ಪ್ರಕಾರ ಕೆಲಸ ಮಾಡಬೇಕು. ಮೂರು ತಿಂಗಳಲ್ಲಿ 172 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂತ್ರಿಗಳು ರೈತರು ಐದು ಲಕ್ಷ ಪರಿಹಾರಕ್ಕಾಗಿ ಸಾಯುತ್ತಾರೆ ಎಂದು ಹೇಳಿದ್ದಾರೆ. ಯಾರಾದರೂ ರೈತರು ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ? ಯಡಿಯೂರಪ್ಪ ಅವರ ಕಾಲದಲ್ಲಿ ರೈತರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ರೈತರಿಗೆ ನಾಲ್ಕು ಸಾವಿರ ರೂ ಕೊಡುವುದನ್ನು ನಿಲ್ಲಿಸಿದ್ದಾರೆ. ನಾನು ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆ ರದ್ದುಪಡಿಸಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ನೀಚರು ಎಂದು ಹೇಳುತ್ತಾರೆ. ನೀವು ಒಂದು ಅಗಳು ಅಕ್ಕಿಯನ್ನು ನೀಡಿಲ್ಲ. ಜನರಿಗೆ ಅಕ್ಕಿ ಕೊಡುತ್ತಿರುವ ಮೋದಿ ನೀಚರಾ? ಒಂದು ಕಾಳು ಅಕ್ಕಿ ಕೊಡದ ನೀವು ನೀಚರಾ ಎಂದು ರಾಜ್ಯದ ಜನರು ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಮಾಜಿ ಸಿಎಂ ಸದಾನಂದಗೌಡ ಮಾತನಾಡಿ, ತಜ್ಞರ ಪ್ರಕಾರ ಡಿಸೆಂಬರ್‌ವರೆಗೂ ನೀರು ಆಗಲಿದೆ ಅಷ್ಟೇ. ಆನಂತರ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ. ಯಶವಂತಪುರದಲ್ಲಿ ನೀರೇ ಇಲ್ಲ ಅಂತಾರೆ. ಈಗಲೇ 15 ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಮುಂದೇನು? ವಿಪಕ್ಷದಲ್ಲಿರುವ ನಾವು ಸುಮ್ಮನೇ ಕೂರೋಕೆ ಆಗಲ್ಲ. ಅವರ ಆಡಳಿತದಲ್ಲಿ ಸುಧಾರಣೆ ಆಗುವಂತೆ ಕಾಣುತ್ತಿಲ್ಲ. ಅಭಿವೃದ್ಧಿಗೆ ಮಾರಕವಾಗಿ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ನಾವು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಕಳೆದ ಮೂರು ತಿಂಗಳಿಂದ ಕಾಂಗ್ರೆಸ್ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ದಲಿತರ ಹಣವನ್ನು ಫ್ರೀಬೀಸ್ಗೆ ಬಳಸುತ್ತಿದೆ. ನಮ್ಮ ಅವಧಿಯಲ್ಲಿ ಎಸ್ಸಿ, ಎಸ್ಟಿಗಳ ಅನುದಾನವನ್ನು ಅವರ ಕಲ್ಯಾಣಕ್ಕೆ ಬಳಸಲಾಗಿದೆ. ವಸತಿ ಶಾಲೆ ಕಟ್ಟಿದೆವು. ಲಿಂಗಾಯತರಿಗೆ ನ್ಯಾಯ ಸಿಕ್ಕಿದ್ದರೆ, ಬಿಜೆಪಿಯಲ್ಲಿ ಮಾತ್ರ, ಸುಳ್ಳುಗಳನ್ನು ಹೇಳಿ ಸತ್ಯ ಮಾಡೋಕೆ ಹೊರಟಿದ್ದಾರೆ ಎಂದರು.
ಮಾಜಿ ಡಿಸಿಎಂ ಆರ್. ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಅವರ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಅಭಿವೃದ್ಧಿ ವಿರೋಧಿ, ಜನ ವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು. ಒಂದೆರಡು ತಿಂಗಳ ಆರಂಭದಲ್ಲಿ ಯಾರೂ ಸರ್ಕಾರ ವಿರುದ್ಧ ಮಾತನಾಡಲ್ಲ. ಈ ಸರ್ಕಾರ ಬಂದ ಒಂದೇ ಗಂಟೆಯಲ್ಲಿ ಹಳಸಿ ಹೋಗಿದೆ. ವಿಧಾನಸೌಧದಲ್ಲಿ ಎಲ್ಲಾ ಟ್ರಾನ್ಸ್ಫರ್ಗೂ ದುಡ್ಡು ದುಡ್ಡು. ಒಂದು ಅಡಿ ರಸ್ತೆ ಕೂಡ ಮಾಡಿಲ್ಲ. ಬೊಮ್ಮಾಯಿ ಬಂದಾಗ 9 ಸಾವಿರ ಕೋಟಿ ಬೆಂಗಳೂರಿಗೆ ತಂದರು. ಇವರು ಬಂದ ಮೇಲೆ ದೊಡ್ಡ ಚಂಬು ಕೊಟ್ಟಿದ್ದಾರೆ. ಇವರ ಬಳಿ ದುಡ್ಡು ಇಲ್ಲ ಪಾಪರ್ ಸರ್ಕಾರ. ಇಡೀ ದೇಶದಲ್ಲಿ ಭ್ರಷ್ಟ ಸರ್ಕಾರ. ಪಾಪರ್ ಸರ್ಕಾರ ಕರ್ನಾಟಕದಿಂದ ತೊಲಗಬೇಕು. ಕಾವೇರಿ ನೀರಿಗಾಗಿ ಮಂಡ್ಯದಲ್ಲಿ ಹೋರಾಟ ಮಾಡುತ್ತಿದ್ದಾರೆ. ಮಾರ್ಚ್ ತಿಂಗಳ ಅವಧಿಗೆ ಕುಡಿಯೋಕೆ ನೀರು ಸಿಗಲ್ಲ. ಯಡಿಯೂರಪ್ಪ ಬಾಗಿನ ಬಿಟ್ಟಿದ್ದರು, ಆಗ ತುಂಬಿತ್ತು. ದರಿದ್ರ ಸರ್ಕಾರ ನಿಮ್ಮದು ನೀವು ಬಂದಿರಿ ಕೆಆರ್‌ಎಸ್ ಖಾಲಿ ಆಗಿದೆ. ವೋಟ್ಗಾಗಿ ಎಲ್ಲಾ ಬಾಗಿಲು ತೆರೆದು ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ : ಬಿಜೆಪಿಯಲ್ಲಿ ಭವಿಷ್ಯವಿಲ್ಲವೆಂದು ಪಕ್ಷ ಬಿಟ್ಟು ಹೋಗುವವರ ಭವಿಷ್ಯವೇ ಮುಗಿದಿರುತ್ತದೆ: ಯತ್ನಾಳ್