ಬೆಂಗಳೂರು: ಇನ್ನೂ ವಿಧಾನಸಭೆ ಚುನಾವಣೆಗೆ ಎರಡು ವರ್ಷ ಇರುವಾಗಲೇ ಟಿಕೆಟ್ಗಾಗಿ ಕಿತ್ತಾಡಿದ ಘಟನೆ ಜೆಡಿಎಸ್ ಕಚೇರಿಯಲ್ಲಿ ಇಂದು ನಡೆಯಿತು. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಜಿಲ್ಲಾವಾರು ಸಭೆ ನಡೆಯುತ್ತಿದ್ದ ವೇಳೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಕ್ಷೇತ್ರದ ಎಂಎಲ್ಎ ಟಿಕೆಟ್ ಆಕಾಂಕ್ಷಿ ವೆಂಕಟೇಶ್ ಹಾಗೂ ಅವರ ಬೆಂಬಲಿಗರು ಗಲಾಟೆ ಆರಂಭಿಸಿದರು.
ನಾನು ಕಳೆದ ಬಾರಿ ನಮ್ಮ ಕ್ಷೇತ್ರದಲ್ಲಿ 5 ಕೋಟಿ ಹಣ ಖರ್ಚು ಮಾಡಿದ್ದೇನೆ ಎಂದು ವೆಂಕಟೇಶ್ ಹೇಳಿದರು. ಈಗ ನನ್ನ ಕಡೆಯವರಿಗೆ ನಾನು ಹೇಳಿದವರಿಗೆ ಮಾತ್ರ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಸೊಪ್ಪು ಹಾಕದ ಹೆಚ್.ಡಿ.ಕುಮಾರಸ್ವಾಮಿ ಸಭೆ ಮುಂದುವರೆಸಿದ್ದರು.
ವೆಂಕಟೇಶ್ ಮಾತಿಗೆ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದರು. ಇದರಿಂದ ಆಕ್ರೋಶಗೊಂಡ ವೆಂಕಟೇಶ್ ಗಲಾಟೆ ಮಾಡಿ ಸಭೆಯಿಂದ ಹೊರ ಬಂದು ಕೂಗಾಟ ನಡೆಸಿದರು. ಆಗ ಅವರ ಕಡೆಯವರು ಮನವೊಲಿಸಿ ಮತ್ತೆ ಸಭೆಗೆ ಕರೆದೊಯ್ದರು.