ಬೆಂಗಳೂರು: ಹಾನಗಲ್ ವಿಧಾನಸಭೆ ಉಪಚುನಾವಣೆ ಟಿಕೆಟ್ಗಾಗಿ ಇಬ್ಬರು ನಾಯಕರ ನಡುವೆ ನಡೆದಿರುವ ತಿಕ್ಕಾಟಕ್ಕೆ ಕಾಂಗ್ರೆಸ್ ನಾಯಕರು ಇಂದು ಸಂಧಾನ ಸಭೆ ನಡೆಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾರ್ಯಾಧ್ಯಕ್ಷರಾದ ನೇತೃತ್ವದಲ್ಲಿ ಸಭೆ ನಡೆಯಿತು.
ಹಾನಗಲ್ ಟಿಕೆಟ್ಗಾಗಿ ಶ್ರೀನಿವಾಸ್ ಮಾನೆ ಹಾಗೂ ಮನೋಹರ್ ತಹಶೀಲ್ದಾರ್ ನಡುವೆ ತೀವ್ರ ಪೈಪೋಟಿ ನಡೆದಿದ್ದು, ನಿನ್ನೆ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಮ್ಮತ ಮೂಡಿರಲಿಲ್ಲ. ಇಂದು ಇನ್ನೊಂದು ಸುತ್ತಿನ ಸಭೆ ನಡೆಯಿತು. ಅಲ್ಲಿಯೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಭೆ ವಿಫಲವಾಗಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯುವುದಕ್ಕೂ ಮುನ್ನ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ನಿನ್ನೆ ಕೆಪಿಸಿಸಿ ಅಧ್ಯಕ್ಷರು ನಿವಾಸದಲ್ಲಿ ನಡೆದ ಸಭೆ ಹಾಗೂ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಲಿರುವ ಕಾಂಗ್ರೆಸ್ ನಾಯಕರ ಸಂಧಾನ ಸಭೆಯ ಬಗ್ಗೆ ಮಾಹಿತಿ ಒದಗಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಬಹುತೇಕ ರಾಜ್ಯ ನಾಯಕರು ಶ್ರೀನಿವಾಸ್ಗೆ ಮತ್ತೊಂದು ಅವಕಾಶ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಕೆ.ಬಿ.ಕೋಳಿವಾಡ ಮಾತ್ರ ಮನೋಹರ ತಹಶೀಲ್ದಾರರ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶಾಸಕರಾಗಿ ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ಮನೋಹರ್ ಸಾಕಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಟಿಕೆಟ್ ನೀಡಿದರೆ ಗೆಲ್ಲುವ ಅವಕಾಶ ಇದೆ ಎಂಬ ಮಾಹಿತಿ ಕೊಟ್ಟಿದ್ದಾರೆ. ಜಿಲ್ಲೆಯ ಬಹುತೇಕ ಹಿರಿಯ ನಾಯಕರು ಮನೋಹರ ತಹಶೀಲ್ದಾರರ ಪರ ಒಲವು ಹೊಂದಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದ್ದಾರೆ.
ಇದಾದ ಬಳಿಕ ಕೆಪಿಸಿಸಿ ಕಚೇರಿಗೆ ಆಗಮಿಸಿದ ಕೋಳಿವಾಡ, ಕಾರ್ಯಧ್ಯಕ್ಷ ಸಲೀಂ ಅಹಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಮನೋಹರ್ ತಹಶೀಲ್ದಾರ್ ಹಾಗೂ ಶ್ರೀನಿವಾಸ್ ಮಾನೆ ನಡುವೆ ಸಂಧಾನ ಸಭೆಯಲ್ಲಿ ಹಾವೇರಿ ಜಿಲ್ಲೆಯ ಪ್ರಮುಖ ನಾಯಕರು ಭಾಗಿಯಾಗಿದ್ದರು.
ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದ್ದು, ಇದಾದ ಬಳಿಕ ಮಾತನಾಡಿದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಟಿಕೆಟ್ ಪಡೆಯುವ ರೇಸ್‌ನಲ್ಲಿ ಇಬ್ಬರು ಇದ್ದಾರೆ. ಇಬ್ಬರನ್ನೂ ಕರೆದು ಸಭೆ ಮಾಡಲಾಗಿದೆ. ಸಂಧಾನ ಸಭೆ ಸಕ್ಸಸ್ ಆಗಿದೆ. ಅಭ್ಯರ್ಥಿ ಯಾರು ಅಂತ ಹೈಕಮಾಂಡ್ ಫೈನಲ್ ಮಾಡುತ್ತೆ. ಯಾವುದೇ ಅಸಮಾಧಾನವಿಲ್ಲ. ಭಿನ್ನಾಭಿಪ್ರಾಯ ಎಲ್ಲವೂ ಇವತ್ತಿಗೆ ಮುಗೀತು. ಟಿಕೆಟ್ ಯಾರಿಗೆ ಕೊಟ್ಟರೂ ಎಲ್ಲರೂ ಒಟ್ಟಿಗೆ ಕೆಲಸ ಮಾಡ್ತೇವೆ. ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗ್ತೇವೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಹಾವೇರಿ ಜಿಲ್ಲೆಯ ಮುಖಂಡರ ಸಭೆ ಮಾಡಲಾಗಿದೆ. ಮಾನೆ ಹಾಗೂ ತಹಶೀಲ್ದಾರರು ಸೇರಿದಂತೆ ಎಲ್ಲಾ ಮುಖಂಡರು ಭಾಗಿಯಾಗಿದ್ದರು. ಚುನಾವಣೆ ತಯಾರಿ ಬಗ್ಗೆ ಚರ್ಚೆ ಆಗಿದೆ. ಒಂದೆರಡು ದಿನಗಳಲ್ಲಿ ಅಭ್ಯರ್ಥಿ ಹೆಸರು ಪೈನಲ್ ಆಗುತ್ತದೆ. ಬಿಜೆಪಿ ವೈಫಲ್ಯಗಳನ್ನು ಮುಂದಿಟ್ಟು ಚುನಾವಣೆಗೆ ಹೋಗುತ್ತೇವೆ ಎಂದು ತಿಳಿಸಿದರು.