ಬೆಂಗಳೂರು: ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (NSUI) ನೂತನ ಅಧ್ಯಕ್ಷ ಹಾಗೂ ರಾಜ್ಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಲವು ಗೊಂದಲಗಳ ಗೂಡಾಗಿ ಗೋಚರಿಸಿತು.
NSUI ಅಧ್ಯಕ್ಷ ಕೀರ್ತಿ ಗಣೇಶ್ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಗುಂಪು -ಗುಂಪಾಗಿ ನಿಂತದ್ದು ಕಂಡುಬಂತು. ಯಾವುದೇ ರೀತಿಯಲ್ಲಿಯೂ ಕೋವಿಡ್ ನಿಯಮಾವಳಿಗಳ ಪಾಲನೆ ಆದದ್ದು ಕಂಡುಬರಲಿಲ್ಲ. ಅನಗತ್ಯವಾಗಿ ಅತ್ತಿತ್ತ ಓಡಾಡುವುದು ತಮ್ಮ ನೆಚ್ಚಿನ ನಾಯಕರು ವೇದಿಕೆಗೆ ಬಂದಾಗ ಜಯಘೋಷ ಕೂಗುವುದು, ಬೇಕಾಬಿಟ್ಟಿ ಅತ್ತಿತ್ತ ಸಂಚರಿಸುವ ಕಾರ್ಯ ಮಾಡಿದ್ದು ಕಂಡು ಬಂತು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿಕೆ ಸುರೇಶ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ಸಲಿಂ ಅಹ್ಮದ್, ದ್ರುವ ನಾರಾಯಣ್, ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ನಡೆದ ಎನ್ ಎಸ್ ಯುಐ ರಾಜ್ಯ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗಮಿಸುತ್ತಿದ್ದಂತೆ ಹೂ ಹಾಕಿ ಭರ್ಜರಿ ಸ್ವಾಗತ ಕೋರಲಾಯಿತು. ಇವರಲ್ಲದೇ ಇತರ ನಾಯಕರುಗಳು ಬರುವಾಗ ಸ್ವಾಗತಿಸಲು ನೂಕು ನುಗ್ಗಲು ಏರ್ಪಟ್ಟಿದ್ದು ಕಂಡು ಬಂದಿತು.
ಸಿದ್ದರಾಮಯ್ಯ ಜತೆ ಸೆಲ್ಫಿಗೆ ಮುಗಿಬಿದ್ದ NSUI ಕಾರ್ಯಕರ್ತರು : ಬಂತು ಬಂತು ಟಗರು ಬಂತು ಎಂದು ಕೂಗಿ ಸಂಭ್ರಮಿಸಿದರೆ ಮತ್ತೆ ಕೆಲವರು ಡಿಕೆ ಡಿಕೆ ಎಂದು ಕೂಗಿದರು. ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣಗಳ ಆರ್ಭಟ ಜೋರಾಗಿತ್ತು. ಇಬ್ಬರೂ ನಾಯಕರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ನೂಕುನುಗ್ಗಲು ಏರ್ಪಟ್ಟಿತ್ತು.
ಸಿಟ್ಟಾದ ಡಿಕೆಶಿ : ಕಾರ್ಯಕರ್ತರು ಅತಿರೇಕದ ವರ್ತನೆಯಿಂದ ಒಂದು ಹಂತದಲ್ಲಿ ಬೇಸತ್ತ ಡಿಕೆಶಿ, ಇದೇ ರೀತಿ ಗಲಾಟೆ ಮಾಡುತ್ತಿದ್ದರೆ ನಿಮ್ಮನ್ನೆಲ್ಲಾ ಪಾರ್ಟಿಯಿಂದ ತೆಗೆಯುತ್ತೇನೆ. ಶಿಸ್ತು ಇಲ್ಲ ನಿಮಗೆ, ನಿಮ್ಮನ್ನೆಲ್ಲ ಪಕ್ಷದಿಂದ ತೆಗೆಯುತ್ತೇನೆ. ಶಿಸ್ತು ಇರಬೇಕು ಎಂದು ಕಾರ್ಯಕರ್ತರಿಗೆ ವಾರ್ನಿಂಗ್ ಕೊಟ್ಟು, ಕಿರ್ಚೋದ್ ಎಲ್ಲ ಮುಗೀತು, ಸುಮ್ನೆ ಕೂತ್ಕೊಳ್ಳಿ ಎಂದರು.
ಸಿದ್ದರಾಮಯ್ಯ ಇದ್ದ ವೇದಿಕೆಯಲ್ಲಿ ಡಿಕೆ ಡಿಕೆ ಎಂದ ಕಾರ್ಯಕರ್ತರು: ಸಿದ್ದರಾಮಯ್ಯ ಮುಂದೆಯೇ ಡಿಕೆಶಿಗೆ ಜೈಕಾರ ಹಾಕಿದರು. ಈ ವೇಳೆ, ಮೈಕ್ ತೆಗೆದುಕೊಂಡ ಡಿಕೆಶಿ, ಕಾರ್ಯಕರ್ತರ ಅಶಿಸ್ತು ವಿರುದ್ಧ ಕೋಪಿಸಿಕೊಂಡು ವಾರ್ನಿಂಗ್ ಕೊಟ್ಟರು. ಆದರೂ ಕಾರ್ಯಕರ್ತರ ಕೂಗಾಟ ನಿಲ್ಲಲಿಲ್ಲ.
NSUI ಅಧ್ಯಕ್ಷ - ಉಪಾಧ್ಯಕ್ಷರ ಪೈಪೋಟಿ: ಅಧ್ಯಕ್ಷ ಕೀರ್ತಿ ಗಣೇಶ ಹಾಗೂ ಉಪಾಧ್ಯಕ್ಷ ಜೈಯೆಂದರ್ ಮದ್ಯೆ ಪೈಪೋಟಿ ಕಂಡು ಬಂದಿತು. ಜೈಕಾರ ಹಾಕಿ ಬೆಂಬಲಿಗರ ಪೈಪೋಟಿ ವ್ಯಕ್ತಪಡಿಸಿದರು. ಎರಡು ಬಣಗಳ ಕಿತ್ತಾಟಕ್ಕೆ ಡಿಕೆಶಿ ಗರಂ ಆಗಿ, ನಿಮ್ಮ ಪೋಟೋ ಮೊದಲು ತೆಗಿರಿ. ಪಾರ್ಟಿ ಫೋಟೋ ಮತ್ತು ಬಾವುಟ ಇರಬೇಕು. ನಿಮಗೆ ಉತ್ಸಾಹ ಇದೆ, ಆದರೆ ಡಿಸಿಪ್ಲೇನ್ ಇರಬೇಕು. ಮೀಡಿಯಾ ಇದೆ ಲೈವ್ ಹೊಗ್ತಾ ಇದೆ ಅಂತ ಎಚ್ಚರಿಕೆ ಇರಲಿ ಎಂದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಅರಿವು ಇರಬೇಕು. ಇಲ್ಲಾಂದರೆ ಬಿಜೆಪಿ ಕೊಮುವಾದ ತುಂಬಿ ದಾರಿ ತಪ್ಪಿಸುತ್ತೆ. ಭಾರತ ಜಾತಿ ವ್ಯವಸ್ಥೆ ಇರುವ ದೇಶ. ಇದಕ್ಕೆ ಅಂಬೇಡ್ಕರ್ ಸಂವಿಧಾನ ರಚಿಸಿದ್ರು. ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ಎಲ್ಲರೂ ಒಪ್ಪಿಕೊಂಡ್ರು ಕೂಡ.
ಆದ್ರೆ ಬಿಜೆಪಿಗೆ ಜಾತ್ಯತೀತ ತತ್ವದಲ್ಲಿ ನಂಬಿಕೆಯಿಲ್ಲ. ಮೇಷ್ಟ್ರು ಸರಿ ಇದ್ರೆ ವಿದ್ಯಾರ್ಥಿಗಳು ಸರಿ ಇರ್ತಾರೆ. ನಾಯಕರು ಸರಿ ಇದ್ರೆ ಪಕ್ಷ ಸರಿ ಇರುತ್ತೆ ಇದನ್ನು ಅರಿತು ನೀವು ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದಂತೆ ತರಾತುರಿಯಲ್ಲಿ ಹೊರಟ ಸಿದ್ದರಾಮಯ್ಯ, ಮಧ್ಯೆ ರಾಷ್ಟ್ರಗೀತೆ ಕೇಳಿಸಿದ ಕಾರಣದಿಂದ ವಿದ್ಯಾರ್ಥಿಗಳ ಮಧ್ಯೆಯೇ ನಿಂತರು. ಈ ವೇಳೆ ವಿದ್ಯಾರ್ಥಿಗಳ ಮಧ್ಯೆಯೇ ನಿಂತು ಗೌರವಿಸಿದ ಸಿದ್ದರಾಮಯ್ಯ ಜತೆ ಸೇಲ್ಪಿ ತೆಗೆಯಲು ಕೆಲ ಕಾರ್ಯಕರ್ತರು ಮುಂದಾದರು. ಸೇಲ್ಪಿ ಬೇಡ ಎಂದು ಬುದ್ದಿವಾದ ಹೇಳಿದ ಸಿದ್ದರಾಮಯ್ಯ ರಾಷ್ಟ್ರಗೀತೆ ಮುಕ್ತಾಯದ ನಂತರ ಅಲ್ಲಿಂದ ತೆರಳಿದರು.
ಇದನ್ನೂ ಓದಿ : ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ- ಡಿಕೆಶಿ ಫೈಟ್ ಮುಗಿದಿಲ್ಲ: ಉಮೇಶ್ ಕತ್ತಿ