ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಹೈಕಮಾಂಡ್ನ ಪರಮೋಚ್ಚ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯಕ್ಕೆ ಪದೇ ಪದೆ ಕರೆಸುತ್ತಿದೆ. ಭೇಟಿ ನೀಡಿ 15 ದಿನ ಕಳೆಯುತ್ತಿದ್ದಂತೆ ಅಮಿತ್ ಶಾ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಫೆಬ್ರವರಿ 11 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿಗೆ ಆಗಮಿಸಲಿದ್ದಾರೆ. ಪುತ್ತೂರಿನಲ್ಲಿ ನಡೆಯಲಿರುವ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ವರ್ಷಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಸ್ಥೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ತೆಂಕಿಲದ ವಿವೇಕಾನಂದ ಶಾಲಾ ಮೈದಾನದಲ್ಲಿ ಬಿಜೆಪಿಯಿಂದ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ಜನವರಿ 28 ರಂದು ಬೆಳಗಾವಿ ಮತ್ತು ಹುಬ್ಬಳ್ಳಿ ಆಗಮಿಸಿದ್ದ ವೇಳೆಯಲ್ಲಿಯೇ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಕ್ಕೆ ಭೇಟಿ ನೀಡುವುದಾಗಿ ಅಮಿತ್ ಶಾ ಹೇಳಿದ್ದರು. ಕುಂದಗೋಳದಲ್ಲಿ ಬೂತ್ ಮಟ್ಟದ ವಿಜಯಸಂಕಲ್ಪ ಸಮಾವೇಶ, ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದ ಅಮಿತ್ ಶಾ ಅಂದು ಸಂಜೆ ಬೆಳಗಾವಿಯಲ್ಲಿ ಪಕ್ಷದ ಪದಾಧಿಕಾರಿಗಳ ಜೊತೆ ಪ್ರಮುಖ ಸಭೆ ನಡೆಸಿ ದೆಹಲಿಗೆ ವಾಪಸ್ ಆಗಿದ್ದರು.
ಪಕ್ಷಕ್ಕೆ ನೆಲೆ ಇಲ್ಲದ ಪ್ರಾಂತ್ಯಗಳನ್ನು ಕೇಂದ್ರೀಕರಿಸಿರುವುದಲ್ಲದೇ ಪ್ರಾಬಲ್ಯ ಇರುವ ಪ್ರಾಂತ್ಯವನ್ನೂ ಕಡೆಗಣಿಸದೇ ಎಲ್ಲ ಕಡೆ ವ್ಯವಸ್ಥಿತವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಪ್ರಚಾರ ಮಾಡಲು ಹೈಕಮಾಂಡ್ ಮುಂದಾಗಿದೆ. ಬಿಜೆಪಿಯ ಭದ್ರ ಕೋಟೆ ಎಂದೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಕರೆಯಲಾಗುತ್ತಿದ್ದರು ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಅಮಿತ್ ಶಾ ತಂತ್ರ ಹೆಣೆಯುತ್ತಿದ್ದಾರೆ. ಮುಂದಿನ ಬಾರಿ ಪೂರ್ಣ ಬಹುಮತದ ಸರ್ಕಾರ ರಚನೆಗೆ ಹೈಕಮಾಂಡ್ ಪಣ ತೊಟ್ಟಿದೆ.
ಶಾ ಭೇಟಿಯ ಎರಡು ದಿನಕ್ಕೆ ಮೋದಿ ಆಗಮನ: ಫೆಬ್ರವರಿ 11ಕ್ಕೆ ಶಾ ರಾಜ್ಯ ಪ್ರವಾಸ ಮಾಡಿದರೆ ಮೋದಿ 13ಕ್ಕೆ ಬೆಂಗಳೂರಿಗೆ ಬರಲಿದ್ದಾರೆ. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ 2023ಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ನಂತರ ಫೆಬ್ರವರಿ 27 ರಂದು ಮತ್ತೊಮ್ಮೆ ಮೋದಿ ರಾಜ್ಯಕ್ಕೆ ಆಗಮಿಸಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಿದ್ದಾರೆ. 27ರ ಪ್ರಧಾನಿ ಮೋದಿ ಆಗಮಕ್ಕೂ ಮುನ್ನ ಅಮಿತ್ ಶಾ ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದ್ದು, ದಿನಾಂಕವನ್ನು ಹೊಂದಿಸುವ ಪ್ರಯತ್ನ ನಡೆಸಲಾಗುತ್ತಿದೆ.
ಇನ್ನು ಮೂರು ತಿಂಗಳು ರಾಜ್ಯದಲ್ಲಿ ಬಿಡುವಿಲ್ಲದ ಪ್ರಚಾರ ಕಾರ್ಯಗಳನ್ನು ಆಯೋಜಿಸಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಪ್ರಸಕ್ತ ತಿಂಗಳಿನಲ್ಲಿ ನಡೆಯಲಿರುವ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಪೂರ್ಣ ಪ್ರಮಾಣದಲ್ಲಿ ಪ್ರಚಾರ ಕಾರ್ಯ ನಡೆಸಲಿದೆ. ನಾಲ್ಕು ದಿಕ್ಕಿನಿಂದ ರಥಯಾತ್ರೆ, ಜಿಲ್ಲಾ ಮಟ್ಟದ ಮೋರ್ಚಾಗಳ ಸಮಾವೇಶ, ಬೃಹತ್ ಸಮಾವೇಶಗಳು ನಡೆಯಲಿದ್ದು, ಪ್ರಮುಖ ಯಾತ್ರೆ ಮತ್ತು ಸಮಾವೇಶಗಳಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹೈಕಮಾಂಡ್ ನ ಪ್ರಮುಖ ನಾಯಕರೆಲ್ಲ ಪ್ರಚಾರ ಕಾರ್ಯಕ್ಕೆ ಆಗಮಿಸಲಿದ್ದು, ಸದ್ಯದಲ್ಲೇ ಚುನಾವಣೆಗೆ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟಿಸಲಿದ್ದು, ಆಗ ಯಾರೆಲ್ಲಾ ನಾಯಕರು ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಯಲಿದೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಒಡಕು ಮೂಡಿಸುವ ಜೆಡಿಎಸ್, ಕಾಂಗ್ರೆಸ್ ತಂತ್ರ ಫಲಿಸಲ್ಲ: ಬಿ.ವೈ.ವಿಜಯೇಂದ್ರ