ಬೆಂಗಳೂರು : ಮದುವೆಯಾಗಿ ಪತಿಯೊಂದಿಗೆ ವಾಸಿಸುತ್ತಿರುವ ಮಹಿಳೆ ತನ್ನ ತಂದೆಯ ಉದ್ಯೋಗಕ್ಕೆ ಅನುಕಂಪದ ಆಧಾರದ ಮೇಲೆ ಅರ್ಹಳು ಎಂದು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ಎಲ್ಐಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಆ ಹುದ್ದೆಯನ್ನು ತನಗೆ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಎಲ್ಐಸಿ ಉದ್ಯೋಗಿಯಾಗಿದ್ದ ತಂದೆ ನಿಧನದ ನಂತರ ಅರ್ಜಿದಾರರು ಉದ್ಯೋಗ ಕೋರಿದ್ದಾರೆ. ಆದರೆ ತಂದೆ ನಿಧನಕ್ಕೆ ಹಲವು ವರ್ಷಗಳ ಮುನ್ನವೇ ಅರ್ಜಿದಾರ ಮಹಿಳೆ ಮದುವೆಯಾಗಿ ಪತಿಯ ಜತೆ ನೆಲೆಸಿದ್ದಾರೆ. ಹಾಗಾಗಿ ಹಕ್ಕು ಮಂಡಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ನಮ್ಮ ಧರ್ಮ ಗ್ರಂಥಗಳಲ್ಲಿ ‘ಭರತ ರಕ್ಷತಿ ಯೌವ್ವನೆ’ ಎಂಬ ಅಂಶವನ್ನು ಸೇರ್ಪಡೆ ಮಾಡಲಾಗಿದೆ. ಅದರ ಅರ್ಥ ಪತಿ ಪತ್ನಿಯ ಜೀವನ ನಿರ್ವಹಣೆಗೆ ಜೀವನಾಂಶ ನೀಡಬೇಕೆನ್ನುವುದು. ಅದೇ ಅಪರಾಧ ದಂಡ ಸಂಹಿತೆ ಸೆಕ್ಷನ್ 125, ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24 ಮತ್ತು 25 ಸೇರಿದಂತೆ ಹಲವು ಕಾಯಿದೆಗಳಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಹಾಗಾಗಿ ವಿವಾಹವಾಗಿ ಪತಿಯ ಮನೆಯಲ್ಲಿ ನೆಲೆಸಿರುವ ಮಹಿಳೆಗೆ ಅನುಕುಂಪದ ಆಧಾರದಲ್ಲಿ ಉದ್ಯೋಗ ನೀಡಲಾಗದು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಎಲ್ಐಸಿ ನೇಮಕಾತಿ ನಿಯಮಗಳ 21(2)ರ ಪ್ರಕಾರ ವಿವಾಹಿತ ಮಗಳು ಅನುಕಂಪದ ಆಧಾರದ ಉದ್ಯೋಗಕ್ಕೆ ಅವಕಾಶವಿಲ್ಲ ಎಂಬುದಾಗಿ ತಿಳಿಸಿದೆ.
ತಂದೆಯ ನಿಧನ ನಂತರ ಪುತ್ರನಂತೆ ಪುತ್ರಿಗೂ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವ ಹಕ್ಕಿದೆ ಎಂಬ ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, ಎಲ್ಐಸಿ ಸಿಬ್ಬಂದಿ ನೇಮಕ ನಿಯಮದಲ್ಲಿ ವಿವಾಹಿತ ಪುತ್ರಿಯನ್ನು ಅನುಕಂಪದ ಆಧಾರದ ಮೇಲೆ ಉದ್ಯೋಗದಿಂದ ಹೊರಗಿಡಲಾಗಿದೆ. ಹಾಗಾಗಿ ಅರ್ಜಿದಾರರ ಕೋರಿಕೆ ಮಾನ್ಯ ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ.
ಜತೆಗೆ, ಮೃತಪಟ್ಟವರ ಕುಟುಂಬವು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೆ ಅನುಕಂಪ ಆಧಾರದ ಮೇಲೆ ಉದ್ಯೋಗ ಕೋರಬಹುದು. ಆದರೆ ಈ ಪ್ರಕರಣದಲ್ಲಿ ಎಲ್ಐಸಿ ಮೃತರ ಕುಟುಂಬಕ್ಕೆ 1.58 ಕೋಟಿ ರೂ ಪರಿಹಾರವನ್ನು ಪಾವತಿಸಿದೆ. ಅಲ್ಲದೆ, ಮೃತರ ಮಗಳು ಅವರ ಕುಟುಂಬ ಸದಸ್ಯರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪುರಸ್ಕರಿಸುವುದಕ್ಕೆ ಸಾಧ್ಯವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಇದನ್ನೂ ಓದಿ : ಕೆಲವು ಖಾತೆಗಳನ್ನು ನಿರ್ಬಂಧಿಸುವ ವಿಚಾರ: ಎಕ್ಸ್ ಕಾರ್ಪ್ ಮೇಲ್ಮನವಿ ವಿಚಾರಣೆಗೆ ಅಂಗೀಕರಿಸಿದ ಹೈಕೋರ್ಟ್