ಬೆಂಗಳೂರು: ಒಂಬತ್ತು ವರ್ಷ ಮಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸದ ತಂದೆಗೆ ಮಗಳನ್ನು ತನ್ನ ವಶಕ್ಕೆ ನೀಡಬೇಕು ಎಂದು ವಾದ ಮಂಡಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಗಳನ್ನು ತಂದೆ ಮತ್ತು ತಾಯಿಯೊಂದಿಗೆ ಸಮಾನವಾಗಿ ನೆಲೆಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ತಂದೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿದೆ.
9 ವರ್ಷದ ಹೆಣ್ಣು ಮಗುವಿಗೆ ಸೌಹಾರ್ದಯುತ ವಾತಾವರಣ ನಿರ್ಮಸಲು ಸಾಧ್ಯವಾಗದ ತಂದೆ, ಮಗುವನ್ನು ವಶಕ್ಕೆ ಕೇಳುವುದಕ್ಕೆ ಅರ್ಹರಿರುವುದಿಲ್ಲ. ಹೀಗಾಗಿ ಹೆಣ್ಣು ಮಗು ತಾಯಿಯೊಂದಿಗೆ ಇರಬೇಕಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ಜತೆಗೆ, ಈ ಪ್ರಕರಣದಲ್ಲಿ ಕಳೆದ ಐದು ವರ್ಷಗಳಿಂದ (ಮಗು 4 ವರ್ಷವಿದ್ದಾಗಿನಿಂದ) ತಂದೆ-ತಾಯಿ ಜಗಳವಾಡುತ್ತಿರುವುದನ್ನು ಗಮನಿಸುತ್ತಿದೆ. ಪೋಷಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಬೌದ್ಧಿಕ ಶಕ್ತಿ ಮಕ್ಕಳಲ್ಲಿ ಇರುವುದಿಲ್ಲ. ಅಲ್ಲದೆ, ಮಗುವಿನ ಸಾಮಾಜಿಕ, ಭೌತಿಕ, ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೋಷಕರು ಸದಾಕಾಲ ಶ್ರಮಿಸಬೇಕು. ಹೀಗಾಗಿ ಹೆಣ್ಣು ಮಗು ತನ್ನ ತಾಯಿಯೊಂದಿಗೆ ನೆಲೆಸಲು ಆದ್ಯತೆ ನೀಡಬೇಕಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು?: ಅಂತರ್ ಧರ್ಮೀಯ ದಂಪತಿ 2005ರಲ್ಲಿ ವಿವಾಹವಾಗಿದ್ದು, 2014ರಲ್ಲಿ ಮಗು ಜನಿಸಿತ್ತು. ದಂಪತಿ ನಡುವೆ ಉಂಟಾದ ಮನಃಸ್ತಾಪದಿಂದ ಪತ್ನಿ ನಾಲ್ಕು ವರ್ಷದ ಮಗುವಿನೊಂದಿಗೆ ಪ್ರತ್ಯೇಕವಾಗಿ ನೆಲೆಸಿದ್ದರು. ಇದಾದ ಬಳಿಕ ಮಗುವನ್ನು ತನ್ನ ವಶಕ್ಕೆ ಪಡೆಯಲು ಪತಿ ನ್ಯಾಯಾಂಗ ಹೋರಾಟ ಪ್ರಾರಂಭಿಸಿ, ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಜತೆಗೆ, ತಾನು ಮಗುವಿಗೆ ಕಾನೂನುಬದ್ಧ ಪೋಷಕರು ಎಂದು ಘೋಷಣೆ ಮಾಡಬೇಕು ಎಂದು ಕೋರಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದರು. ಇದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಬೇಸಿಗೆ ರಜೆ ದಿನಗಳಲ್ಲಿ ಮಗಳು ತಂದೆಯೊಂದಿಗೆ ನೆಲೆಸಲು ಅವಕಾಶ ಮಾಡಿಕೊಟ್ಟಿತ್ತು. ಜತೆಗೆ ಪತ್ನಿಗೆ ಜೀವನಾಂಶ ನೀಡಲು ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಪತ್ನಿ (ಮಗುವಿನ ತಾಯಿ) ಮಗುವನ್ನು ತಂದೆಯಾದವರು ಸರಿಯಾದ ರೀತಿಯಲ್ಲಿ ನೋಡಿಕೊಳ್ಳುವುದಿಲ್ಲ. ಹೀಗಾಗಿ ಮಗುವನ್ನು ಪತಿಯ ವಶಕ್ಕೆ ನೀಡಬಾರದು ಎಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಿಚಾರಣೆ ಸಂದರ್ಭಕ್ಕೆ ಬೇಸಿಗೆ ರಜೆ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥ ಪಡಿಸಿತ್ತು.
ಇದಾದ ಬಳಿಕ ಮಗಳನ್ನು ಸತಿ-ಪತಿಗೆ ಸಮಾನ ಅವಕಾಶ ನೀಡಬೇಕು ಎಂದು ಕೋರಿ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ನ್ಯಾಯಾಲಯ ವಾರದ ಮೂರು ದಿನಗಳಲ್ಲಿ ಕೌಟುಂಬಿಕ ನ್ಯಾಯಾಲಯದ ಮಕ್ಕಳ ಭೇಟಿ ಕೇಂದ್ರದಲ್ಲಿ ಮಗುವನ್ನು ಭೇಟಿ ಮಾಡುವುದಕ್ಕೆ ಪತಿಗೆ ಅವಕಾಶ ನೀಡಿತ್ತು. ಇದನ್ನು ಪ್ರಶ್ನಿ ಪತಿ ಮತ್ತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಸಮಾನ ಅವಕಾಶ ನೀಡಬೇಕು ಎಂದು ಕೋರಿದ್ದರು.
ಪ್ರತಿವಾದಿಗಳ ಪರ ವಕೀಲರು ವಾದ ಮಂಡಿಸಿ, ಮಗಳು ತಂದೆಯೊಂದಿಗೆ ಚೆನ್ನಾಗಿದ್ದಾಳೆ ಎಂಬುದನ್ನು ತೋರಿಸುವುದಕ್ಕಾಗಿ ತಂದೆಯೊಂದಿಗೆ ಒಂದೇ ಹಾಸಿಗೆಯಲ್ಲಿ ಮಲಗಿರುವ ಫೋಟೋಗಳನ್ನು ತೆಗೆಯುತ್ತಿದ್ದಾರೆ. ಇದು ನಿಯಮ ಬಾಹಿರವಾಗಿದ್ದು, ಮಗುವನ್ನು ತಂದೆಯ ವಶಕ್ಕೆ ನೀಡಬಾರದು ಎಂದು ಕೋರಿದ್ದಾರೆ. ಅಲ್ಲದೆ, ಮಗುವನ್ನು ತನ್ನ ವಶಕ್ಕೆ ಪಡೆಯುವುದಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ಮತ್ತು ಮರು ಪರಿಶೀಲನಾ ಅರ್ಜಿ ವಜಾಗೊಂಡಿದೆ. ಈ ನಿಟ್ಟಿನಲ್ಲಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.
ಇದನ್ನೂ ಓದಿ: ಮಗುವನ್ನು ಪತಿಯ ಸುಪರ್ದಿಗೆ ನೀಡದ ಪತ್ನಿ : ಹೈಕೋರ್ಟ್ನಿಂದ ಜಾಮೀನು ರಹಿತ ವಾರಂಟ್