ಆನೇಕಲ್: ಟೋಲ್ ಗೇಟ್ಗಳಲ್ಲಿ ಸಂಚಾರ ದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಆದರೂ, ಬಹಳಷ್ಟು ಜನ ಫಾಸ್ಟ್ಟ್ಯಾಗ್ ಅಳವಡಿಸಿಕೊಳ್ಳದ ಪರಿಣಾಮ ಗೊಂದಲ ಮುಂದುವರೆದಿದೆ.
ಈ ವಿಚಾರಕ್ಕೆ ಬೆಂಗಳೂರು-ತಮಿಳುನಾಡು ರಾಷ್ಟ್ರೀಯ ಹೆದ್ದಾರಿ-7ರ ಅತ್ತಿಬೆಲೆ ಟೋಲ್ ಬಳಿ ಬುಧವಾರ ಬೆಳಗ್ಗೆ ಟೋಲ್ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಜಟಾಪಟಿ ನಡೆದಿದೆ. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡುವಂತಾಯ್ತು.
ಈ ಟೋಲ್ ಗೇಟ್ನಲ್ಲಿ ಫಾಸ್ಟ್ಟ್ಯಾಗ್ ಅಳವಡಿಸಿರುವ ವಾಹನಗಳು ತೆರಳಲು 3 ಲೇನ್ ಹಾಗೂ ನಗದು ಪಾವತಿಸುವ ವಾಹನಗಳಿಗಾಗಿ 2 ಲೇನ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ವೇಳೆ ಫಾಸ್ಟ್ಟ್ಯಾಗ್ ಅಳವಡಿಸದೆ ಫಾಸ್ಟ್ಟ್ಯಾಗ್ ಲೇನ್ನಲ್ಲಿ ಬಂದರೆ ಸವಾರರು ಎರಡು ಪಟ್ಟು ಹಣ ಪಾವತಿಸಬೇಕು. ಇದೇ ವಿಚಾರಕ್ಕಾಗಿ ವಾಹನ ಚಾಲಕ ಹಾಗೂ ಟೋಲ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.
ವಾಹನ ಸವಾರರೊಬ್ಬರು ಮಾತನಾಡಿ, ಫಾಸ್ಟ್ಟ್ಯಾಗ್ನಿಂದ ವಾಹನ ಸವಾರರಿಗೆ ಬಹಳ ತೊಂದರೆಯಾಗುತ್ತಿದೆ. 100 ಮೀಟರ್ ರಸ್ತೆ ಬಳಸಿದರೂ ಹಣ ಕಟ್ಟಬೇಕಾಗಿದೆ. ಫಾಸ್ಟ್ಟ್ಯಾಗ್ ಸ್ಕ್ಯಾನ್ ಆಗದಿದ್ದರೆ ಹಿಂದಕ್ಕೆ ಹೋಗಿ ಬರಬೇಕಾಗುತ್ತದೆ. ಇದು ತುಂಬಾ ಸಮಸ್ಯೆ ತಂದೊಡ್ಡುತ್ತಿದೆ. ಇದಕ್ಕಿಂತ ಮೊದಲಿದ್ದ ವ್ಯವಸ್ಥೆಯೇ ಹೆಚ್ಚು ಉತ್ತಮ ಎಂದು ಅಭಿಪ್ರಾಯಪಟ್ಟರು.