ಬೆಂಗಳೂರು: ನಗರದಲ್ಲಿ ಭಾರತ್ ಬಂದ್ಗೆ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ರೈತರು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿ ಐಕ್ಯ ಹೋರಾಟ ಸಮಿತಿಯಿಂದ ನಿನ್ನೆಯಿಂದಲೇ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಯುತ್ತಿದ್ದು, ಇಲ್ಲಿಂದಲೇ ಮೈಸೂರು ಬ್ಯಾಂಕ್ ಸರ್ಕಲ್, ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ಱಲಿ ನಡೆಯಲಿದೆ.
ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ದೇಶಾದ್ಯಂತ ರೈತರ ಪ್ರತಿಭಟನೆ ಆರಂಭವಾಗಿದೆ. ರಾಜ್ಯದ ಹೋಬಳಿ, ತಾಲೂಕು, ಪ್ರತೀ ಹಳ್ಳಿಗಳಲ್ಲಿ ಪ್ರತಿಭಟನೆ ಆರಂಭವಾಗಿದೆ. ಮಳೆಯಿಂದ ಬೆಂಗಳೂರಿನಲ್ಲಿ ರೈತರು ಒಗ್ಗೂಡುವುದು ತಡವಾಗುತ್ತಿದೆ. ಕೆಲವು ಕಡೆ ರಸ್ತೆ ತಡೆ ನಡೆಯುತ್ತಿದೆ. ಮಾರುಕಟ್ಟೆಗಳು ಬಂದ್ ಆಗುತ್ತಿವೆ. ಎಲ್ಲಾ ರೈತರು ಮೈಸೂರು ಬ್ಯಾಂಕ್ ಸರ್ಕಲ್ ಬಳಿ ತೆರಳಿ, ಅಲ್ಲಿಂದ ಫ್ರೀಡಂ ಪಾರ್ಕ್ ವರೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಓದಿ: ಬೆಂಗಳೂರು: ಭಾರತ್ ಬಂದ್ ಹಿನ್ನೆಲೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ
ಕೆ ಆರ್ ಮಾರುಕಟ್ಟೆಯ ಅಧ್ಯಕ್ಷ ಬಿಜೆಪಿ ಪಕ್ಷದವರು. ಹೋಟೆಲ್ ಸಂಘದವರಿಗೂ ಸರ್ಕಾರ ಒತ್ತಡ ಹೇರಿದೆ, ಆಟೋ ಚಾಲಕರಿಗೂ ಬಂದ್ ಮಾಡದಂತೆ ಒತ್ತಡ ಇದೆ. ಆದ್ರೆ ನಮ್ಮ ಪ್ರತಿಭಟನೆ ಇಲ್ಲಿಗೆ ನಿಲ್ಲುವುದಿಲ್ಲ. ಮುಂದೆ ಒಂದು ವಾರ ಕಾಲ ಪ್ರತಿಭಟನೆ ನಡೆಸಿ ಎಲ್ಲರಿಗೂ ಬಿಸಿ ಮುಟ್ಟಿಸಲಿದ್ದೇವೆ. ಹೋಟೆಲ್ ಉದ್ಯಮ ರೈತರ ಜೊತೆ ನಿಲ್ಲಬೇಕಿತ್ತು. ಆದರೆ ರಾಜಕೀಯ ಕಾರಣಕ್ಕೆ ಈಗ ತೆರೆದು, ಮುಂದೆ ಒಂದು ವಾರ ಬಂದ್ ಮಾಡುವಂತಹ ಪರಿಸ್ಥಿತಿ ಬರಲಿದೆ. ಮುಂದೆ ಸಾವಿರಾರು ಸಂಖ್ಯೆಯಲ್ಲಿ ರೈತರು ನಗರಕ್ಕೆ ಬಂದು ಪ್ರತಿಭಟನೆ ನಡೆಸಲಿದ್ದಾರೆ ಎಂದರು.
ರಾಜ್ಯದಲ್ಲಿ ಹಾಗೂ ನಗರದ ಹೊರವಲಯದಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಬಂಧಿಸಲಾಗ್ತಿದೆ. ಆದ್ರೆ ನಿಜವಾದ ಕಳ್ಳರನ್ನು ಹಿಡಿಯಿರಿ, ರೈತರನ್ನು ಅಲ್ಲವೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.