ಬೆಂಗಳೂರು: ಕೇಂದ್ರ ಸರ್ಕಾರದ ಮೂರು ಕೃಷಿ ವಿರೋಧಿ ಕಾಯ್ದೆಗಳು ಸೇರಿದಂತೆ ರಾಜ್ಯದ ರೈತರ 23 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತರು ವಿಧಾನಸೌಧ ಚಲೋ ಹೊರಟಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ರೈತರಾದ ರಾಕೇಶ್ ಟಿಕಾಯತ್, ಯದುವೀರ್ ಸಿಂಗ್, ದರ್ಶನ್ ಪಾಲ್ ಕೂಡಾ ಭಾಗಿಯಾಗಿದ್ದಾರೆ.
ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ರ‍್ಯಾಲಿಯು 12-15 ಕ್ಕೆ ಆರಂಭವಾಗಿದ್ದು, ಫ್ರೀಡಂ ಪಾರ್ಕ್ ತಲುಪಲಿದೆ. ಕೆಎಸ್ ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ ಅವರು ಚಾಲನೆ ಕೊಟ್ಟರು. ಸಂಜೆ 4 ಗಂಟೆಗೆ ಸಭೆ ನಡೆಯಲಿದೆ.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಮೂರು ಕೃಷಿ ವಿರೋಧಿ ಕಾಯ್ದೆ, ರಾಜ್ಯದ ಭೂ ಸುಧಾರಣೆ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು. ಅಲ್ಲದೆ ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳಿವೆ. ಎರಡು ವರ್ಷದಿಂದ ಪ್ರವಾಹ ಬಂದು, ರೈತರು ಪರಿಹಾರ ಸಿಗದೆ ಕಷ್ಟದಲ್ಲಿದ್ದಾರೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ, 23 ವಿವಿಧ ಒತ್ತಾಯ ಮಾಡಿ ಬೆಂಗಳೂರು ಚಲೋ ಹೊರಟಿದ್ದೇವೆ. ಅಲ್ಲದೆ ಮಾರ್ಚ್ 26 ಕ್ಕೆ ನಡೆಯುವ ಬಂದ್ ಯಶಸ್ವಿಗೆ ಸಭೆ ನಡೆಸುತ್ತೇವೆ. 48 ಕ್ಕೂ ಹೆಚ್ಚು ಸಂಘಟನೆಗಳಿಂದ ಬಂದ್ ಗೆ ಬೆಂಬಲ ಸಿಗಲಿದೆ ಎಂದರು.
ಓದಿ : ಎಸ್ಐಟಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಸಿಡಿ ಗ್ಯಾಂಗ್ : ಮುಂದುವರೆದ ಶೋಧ ಕಾರ್ಯ
ಕರ್ನಾಟಕ ರಾಜ್ಯ ರೈತ ಸಂಘದ, ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಮಾತನಾಡಿ, ಕೃಷಿ ವಿರೋಧಿ ಮಸೂದೆಗಳ ಹೋರಾಟ ಕೇವಲ ಪಂಜಾಬ್ ಹರಿಯಾಣಕ್ಕೆ ಸೀಮಿತ ಅಲ್ಲ, ದಕ್ಷಿಣ ಭಾರತದ ರಾಜ್ಯಗಳಲ್ಲಿಯೂ ಹೋರಾಟ ನಡೀತಾ ಇದೆ ಎಂಬುದನ್ನು ಕೇಂದ್ರ ಸರ್ಕಾರಕ್ಕೆ ತೋರಿಸಿಕೊಡಬೇಕಿದೆ. ಸರ್ಕಾರ ಮೀನಮೇಷ ಎಣಿಸದೆ, ಮೂರು ಕೃಷಿ ಕಾನೂನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.