ಬೆಂಗಳೂರು : ನೀರಾವರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದವು. ಅಧಿವೇಶನದಲ್ಲಿ ಚರ್ಚಿಸಿ ರೈತರ ಬೇಡಿಕೆ ಈಡೇರಿಸಿಬೇಕೆಂದು ಸಂಘದ ಅಧ್ಯಕ್ಷ ವಾಸುದೇವ ಮೇಟಿ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟಿಸಿದರು.
ವಾಸುದೇವ ಮೇಟಿ ಮಾತನಾಡಿ, ಆಲಮಟ್ಟಿ ಜಲಾಶಯ ಭಾಗದ 9 ಜಿಲ್ಲೆಗಳು ನೀರಾವರಿಯಿಂದ ವಂಚಿತವಾಗಿವೆ. ಭೂಮಿ ಬರಡಾಗಿ ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ನೀರಾವರಿ ವ್ಯವಸ್ಥೆ ಒದಗಿಸುವಂತೆ ಮನವಿ ಮಾಡಿದರು.
ರೈತರ ಮನವಿಗಳು :
- ಕರ್ನಾಟಕದ ಕೃಷ್ಣಾ ನದಿ ಆಲಮಟ್ಟಿ ಜಲಾಶಯದ 512 ರಿಂದ 524 ಅಡಿಗೆ ಎತ್ತರಿಸಲು ತ್ವರಿತ ಕಾಮಗಾರಿಯನ್ನು ಪ್ರಾರಂಭಿಸಲು ಒತ್ತಾಯ.
- ತುಂಗಭದ್ರ ನದಿಗೆ ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಲು ಒತ್ತಾಯ
- ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿಯಿಂದ ಮನೆ ಹಾಗೂ ಬೆಳೆ ನಾಶಕ್ಕೆ ತ್ವರಿತವಾಗಿ ಪರಿಹಾರ ನೀಡಬೇಕೆಂದು ಒತ್ತಾಯ
- ಕೇಂದ್ರ ಸರ್ಕಾರ ತೆಗೆದುಕೊಂಡಿರುವ ರೈತ ವಿರೋಧಿ ಮೂರು ಕಾಯ್ದೆಗಳನ್ನು ಹಿಂಪಡೆಯುವುದು
- ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಒತ್ತಾಯ
- ರಾಯಚೂರು ಜಿಲ್ಲೆಯ ಯರಗೇರಾ ಗ್ರಾಮದ ಭೂಮಿಯನ್ನು ರಾಯಚೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ಈ ಭಾಗದಲ್ಲಿ ಸಣ್ಣ ರೈತರ ಭೂಮಿ, ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗ ಜನಾಂಗಕ್ಕೆ ಕೃಷಿ ಭೂಮಿಯನ್ನು ಅಕ್ರಮವಾಗಿ ಸರ್ಕಾರ ವಶಪಡಿಸಿಕೊಂಡು ಸದರಿ ಬಡ ರೈತರಿಗೆ ಮರು ಭೂಮಿ ಹಂಚಿಕೆ ಮಾಡುವುದು ಮತ್ತು ಬಡ ರೈತರ ಕುಟುಂಬಕ್ಕೆ ಉದ್ಯೋಗ ಕಲ್ಪಿಸುವುದು. ಸರ್ವೆ ನಂ:319 ರಲ್ಲಿನ ಒಟ್ಟು ಭೂಂಇ 275 ಎಕರೆ ಇದ್ದು ಸುಮಾರು 70 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ರೈತರಿಗೆ ಹಕ್ಕುಪತ್ರ ವಿತರಿಸುವುದು
- ಮಂದಗತಿಯಲ್ಲಿ ಸಾಗುತ್ತಿರುವ ಎತ್ತಿನಹೊಳೆ ಯೋಜನೆ ತ್ವರಿತ ಗತಿಯಲ್ಲಿಕಾಮಗಾರಿಗಳನ್ನು ಪೂರ್ಣಗೊಳಿಸಲು ಒತ್ತಾಯ
- ಕರ್ನಾಟಕದಲ್ಲಿ ಬೆಳೆದಿರುವ ರೈತರ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಬೆಂಗಳೂರಿನಲ್ಲಿರುವ ಮೂಲ ನಿವೇಶನಗಳನ್ನು ರೈತ ಸಂಘದ ಮುಖಾಂತರ ರೈತರಿಗೆ ನೀಡಲು ಮನವಿ
- ಬೆಂಗಳೂರಿನ ಬೇಗೂರು ಹೋಬಳಿ ಎಲೆನಹಳ್ಳಿ ಮೈಲಸಂದ್ರ ಗ್ರಾಮದ ಸರ್ವೆ ನಂ: 82, 83, 47ರಲ್ಲಿರುವ ರೈತರ ಭೂಮಿಯನ್ನು ಸರ್ಕಾರದಿಂದ ಸಂಶೋಧನೆ ನಡೆಸುತ್ತೇವೆಂದು ಅನುಮತಿ ಪಡೆದು ವಸತಿ ಉದ್ದೇಶಕ್ಕೆ ರೂ.1000 ಕೋಟಿಗಳಿಗೆ ಹರಾಜು ಮುಖಾಂತರ ಗುಜರಾತ್ ಮೂಲದ ಅದ್ವಾಂತ ಯು.ಪಿ.ಎಲ್ ಕಂಪನಿ ನೀಡಿರುವ ಆದೇಶವನ್ನು ಹಿಂಪಡೆದು ಕೂಡಲೇ ರೈತರಿಗೆ ಸಂಶೋದನೆ ನಡೆಸಲು ಪ್ರೊ.ನಂಜುಂಡಸ್ವಾಮಿ ಹೆಸರಿನಲ್ಲಿ ರೈತಸಂಘದ ಮುಖಾಂತರ ಆದೇಶ ಹೊರಡಿಸಲು ಮನವಿ
- ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗದ ಕೆರೆಗಳ ಒತ್ತುವರಿ ತೆರೆವುಗೊಳ್ಳಿಸಬೇಕು ಹಾಗೂ ರಾಜಕಾಲುವೆಗಳನ್ನು ತೆರವುಗೊಳಿಸಬೇಕು
ಈ 10 ಬೇಡಿಕೆಗಳ ಕುರಿತು ಪತ್ರ ಬರೆದು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗಿದೆ.