ಬೆಂಗಳೂರು: ಈ ವರ್ಷ ರೈತನ ಬದುಕಿಗೆ ಹಾಗೂ ಅವನ ಹೋರಾಟಕ್ಕೆ ಇದಕ್ಕಿಂತ ದೊಡ್ಡ ಜಯ ಸಿಕ್ಕಿರಲಿಲ್ಲ. ರೈತರು ದೊಡ್ಡ ಚರಿತ್ರೆ ನಿರ್ಮಾಣ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಿಜೆಪಿ ಸರ್ಕಾರ ರೈತರನ್ನು ಭಯೋತ್ಪಾದಕರು ಅಂತಾ ಕರೆದರು. ನಮ್ಮ ಸಿಎಂ ಕೂಡ ರೈತರ ಹೋರಾಟ ಕಾಂಗ್ರೆಸ್ ಕೃಪಾಪೋಷಿತ ಎಂದರು. ಆದರೆ ರೈತರು ಬಗ್ಗಲಿಲ್ಲ ಜಗ್ಗಲಿಲ್ಲ, ಅವರೆಲ್ಲರಿಗೂ ಕೂಡ ರಾಜ್ಯದ ಹಾಗೂ ದೇಶದ ಮಹಾಜನತೆ ನಮನ ಮಾಡಬೇಕು. ಜೊತೆಗೆ, ಈ ಹೋರಾಟದಲ್ಲಿ ಹುತಾತ್ಮರಾದ ರೈತನ ಕುಟುಂಬಕ್ಕೆ 5 ಎಕರೆ ಸರ್ಕಾರಿ ಜಮೀನು ನೀಡಬೇಕೆಂದು ಒತ್ತಾಯ ಮಾಡಿದರು.
ಕೋವಿಡ್ ಸಂದರ್ಭದಲ್ಲಿ ರೈತರಿಗೆ ಪರಿಹಾರ ಘೋಷಣೆ ಮಾಡಿದರು. ಆದರೆ ಆನ್ಲೈನ್ನಲ್ಲಿ ಯಾರೊಬ್ಬರೂ ಅರ್ಜಿ ಹಾಕಿಲ್ಲ. ಬಾಯಿ ಮಾತಲ್ಲಿ ಪರಿಹಾರ ಘೋಷಣೆ ಮಾಡಿದ್ದಾರೆ ಅಷ್ಟೇ. ಕೋವಿಡ್ ಸಂದರ್ಭದಲ್ಲಿ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೂಡ ನೀಡಿಲ್ಲ. ಯಾರ್ ಯಾರಿಗೆ ಪರಿಹಾರ ನೀಡಿದ್ದೀರಿ ಎಂಬುದರ ಮಾಹಿತಿ ನೀಡಿ. ಮೂರು ವರ್ಷದಿಂದ ನೆರೆ ಬಂದರೂ ಯಾರಿಗೂ ಪರಿಹಾರ ನೀಡಿಲ್ಲ. ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಸರ್ಕಾರವನ್ನು ಕುಟುಕಿದರು.ಎಕರೆಗೆ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು
ಈ ವರ್ಷ ದಾಖಲೆ ಪ್ರಮಾಣದ ಮಳೆಯಾಗಿದ್ದು, ರೈತ ಬೆಳೆದ ಬೆಳೆ ಕೊಳೆತು ಹೋಗಿದೆ. ಸಿಎಂ ಗೌರವದಿಂದ ಬೆಂಗಳೂರು ನಗರಕ್ಕೆ ಹೋಗಿ ನೋಡಿದರು. ಸಂತೋಷ, ರೈತ ಬೆಳೆಗೆ ಬೆಲೆ ಇಲ್ಲದೇ ನರಳಿ ಹೋಗಿದ್ದಾನೆ. ನಿಮ್ಮ ಸರ್ಕಾರ ಯಾರ ಜೊತೆಗಿದೆ? ಸರ್ಕಾರ ಪ್ರತಿ ಎಕರೆಗೆ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಪರಿಹಾರ ಪಡೆಯಲು ರೈತರಿಗೆ ಸುಲಭವಾಗಿ ಅರ್ಜಿ ಹಾಕುವಂತಿರಬೇಕು. ಮಂತ್ರಿಗಳು ಹಾಗೂ ಅಧಿಕಾರಿಗಳಿಗೆ ಕಾಳಜಿ ಇಲ್ಲ. ಆದ್ದರಿಂದ ನಮ್ಮ ಕಾರ್ಯಕರ್ತರೆಲ್ಲರೂ ರೈತರಿಗೆ ಅರ್ಜಿ ಸಲ್ಲಿಸುವುದಕ್ಕೆ ಸಹಾಯ ಮಾಡಬೇಕೆಂದು ಡಿಕೆಶಿ ಕರೆ ನೀಡಿದರು.
30 ದಿನಗಳಲ್ಲಿ ರೈತರಿಗೆ ಪರಿಹಾರ ನೀಡಬೇಕು:
ವಿಮಾ ಕಂಪೆನಿಗಳು ಎಷ್ಟು ಹಣ ಕಟ್ಟಿಸಿಕೊಂಡಿದೆ ಮತ್ತು ಎಷ್ಟು ಕೊಟ್ಟಿದೆ ಎಂಬುದನ್ನು ಪರಿಶೀಲಿಶಿ ಕ್ರಮ ಕೈಗೊಳ್ಳಬೇಕು. ಸರ್ಕಾರವೇ ಮಧ್ಯೆ ನಿಂತು ಕಾರ್ಯನಿರ್ವಹಿಸಬೇಕು. 30 ದಿನಗಳಲ್ಲಿ ರೈತರಿಗೆ ಪರಿಹಾರ ನೀಡುವಂತೆ ಮಾಡಬೇಕು. ಅರ್ಜಿ ಹಾಕುವುದನ್ನ ವಿಡಿಯೋ ಮಾಡಿಸಿ. ಯಾವ ರೈತರು ಮೋಸ ಮಾಡೋದಿಲ್ಲ. ಯಾವ ಮಧ್ಯವರ್ತಿಯೂ ಬೇಡ. ಎಲ್ಲಾ ಅಧಿಕಾರಿಗಳು ಈ ಜವಾಬ್ದಾರಿವಹಿಸಬೇಕೆಂದು ಒತ್ತಾಯಿಸಿದರು.
ಪರಿಹಾರ ಕೊಟ್ಟಿರುವುದಕ್ಕೆ ಸರ್ಕಾರ ಸ್ಪಷ್ಟನೆ ನೀಡಲಿ:
ಮಾಜಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ವಾಡಿಕೆಗಿಂತ ಹಿಂಗಾರು ಮಳೆ ಜಾಸ್ತಿಯಾಗಿದೆ. ಹಾಗಾಗಿ ಸಂಪೂರ್ಣ ಬೆಳೆ ಹಾನಿಯಾಗಿದೆ. ಈಗ ಸರ್ಕಾರ ಹೇಳಿರುವಷ್ಟು ಭೂಮಿ ಹಾನಿಯಾಗಿಲ್ಲ. ಅದಕ್ಕಿಂತ ಮೂರು ಪಟ್ಟು ಬೆಳೆ ಹಾನಿಯಾಗಿದೆ. ಸರ್ಕಾರ ನಿಜವಾದ ಹಾನಿಯನ್ನು ಮುಚ್ಚಿಡುತ್ತಿದೆ. ಬಹುತೇಕ ಬೆಳೆಗಳು ಕಟಾವಿಗೆ ಬಂದಿದ್ವು, ಕೆಲವು ಕಾಟಾವೂ ಕೂಡ ಆಗಿದ್ದವು. ಕೈಗೆ ಬಂದ ತುತ್ತು ರೈತರ ಬಾಯಿಗೆ ಬರಲಿಲ್ಲ. ಸರಿಯಾದ ಸಮೀಕ್ಷೆ ಸರ್ಕಾರ ಮಾಡಿಸಿಲ್ಲ. ಸರ್ಕಾರ ಕುಂಭಕರ್ಣ ನಿದ್ದೆಯಲ್ಲಿದೆ. ಹಿಂದೆ ಘೋಷಣೆ ಮಾಡಿದ ಹಣ ಈಗ ಬಿಡುಗಡೆ ಆಗಿದೆ. ಸುಮಾರು 400 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಈಗ ಹಾನಿಯಾಗಿರುವುದಕ್ಕೆ ಪರಿಹಾರ ನೀಡಿಲ್ಲ. ಸರ್ಕಾರ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ. ಇದೊಂದು ಡೊಂಗಿ ಸರ್ಕಾರ. ಎಷ್ಟು ಪರಿಹಾರ ನೀಡಿದ್ದೇವೆ ಎಂದು ಮಾಹಿತಿ ನೀಡಲಿ. ಪರಿಹಾರ ನೀಡಲು ಯಾವುದೇ ನೀತಿ ಸಂಹಿತೆ ಅಡ್ಡಿಯಿಲ್ಲ. ಪರಿಹಾರ ಕೊಟ್ಟ ಬಗ್ಗೆ ಸರ್ಕಾರ ಮೊದಲು ಸ್ಪಷ್ಟನೆ ನೀಡಲಿ ಎಂದರು.