ಬೆಂಗಳೂರು: ಕೃಷಿ ಇಲಾಖೆಗೆ ಬಿ.ಸಿ. ಪಾಟೀಲ್ ಅವರನ್ನು ಸಚಿವರನ್ನಾಗಿ ಮಾಡೋದು ಬೇಡವೇ ಬೇಡ. ಕೃಷಿಯಲ್ಲಿ ಸ್ವಲ್ಪ ಅನುಭವ ಇರುವವರಿಗೆ ಆ ಖಾತೆಯನ್ನು ನೀಡಿ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ನಾರಾಯಣ ರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನಗರದ ಗಾಂಧಿಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಕೃಷಿ ಸಚಿವರಾಗಿದ್ದ ಬಿ.ಸಿ. ಪಾಟೀಲ್ ಅವರಿಗೆ ಬಿತ್ತನೆ ಬೀಜಕ್ಕಾಗಿ ಮನವಿ ಮಾಡಿದ್ದೆವು. ಈಗೆಲ್ಲ ರಾಗಿ ಕೈಯಲ್ಲಿ ಬಿತ್ತುವುದರಿಂದ ಒಂದು ಎಕರೆಗೆ ಇಪ್ಪತ್ತು ಕೆ.ಜಿ ಬೇಕಾಗುತ್ತದೆ. ಆದರೆ ಮೊದಲಿನ ಲೆಕ್ಕಾಚಾರದಂತೆಯೇ ಕೊಡುತ್ತೇವೆ ಎಂದಿದ್ದರು. ಕೃಷಿಯ ಬಗ್ಗೆ ಸ್ವಲ್ಪವೂ ಅನುಭವ ಇಲ್ಲದಿದ್ದರೆ ಪುಸ್ತಕದ ಬದನೆಕಾಯಿ ರೀತಿಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕಬ್ಬು ದರ ನಿಗದಿ ಹಾಗೂ ಕೃಷಿ ಪಂಪ್ಸೆಟ್ ಗಳಿಗೆ ಮೀಟರ್ ಅಳವಡಿಕೆ ವಿರುದ್ಧ ಆಗಸ್ಟ್ 10ರಂದು ರಾಜ್ಯಾದ್ಯಂತ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಕಬ್ಬಿನ ಎಫ್ಆರ್ ದರವನ್ನು ಮೂರು ವರ್ಷಗಳಿಂದ ಕೇವಲ 10 ರೂ. ಏರಿಕೆ ಮಾಡಿ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಎಸಗಿದೆ. 2018-19 ರಲ್ಲಿ ನಿಗದಿಪಡಿಸಿದ ದರವನ್ನೇ ಮುಂದುವರಿಸುತ್ತಿದ್ದಾರೆ. ತಕ್ಷಣವೇ ಪ್ರಸಕ್ತ ಸಾಲಿನ ದರ ನಿಗದಿಪಡಿಸಬೇಕೆಂದು ಒತ್ತಾಯಿಸಿದರು.
ಮೇಕೆದಾಟು ಅಣೆಕಟ್ಟು ನಿರ್ಮಾಣ
ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ಜಾರಿಗೊಳಿಸಬೇಕು. ಹೆಚ್ಚು ಮಳೆ ಬಂದ ವರ್ಷ 100 ಟಿಎಂಸಿಗೂ ಹೆಚ್ಚು ನೀರು ಕಬಿನಿ, ಕಾವೇರಿಯಿಂದ ತಮಿಳುನಾಡಿಗೆ ಹರಿದುಹೋಗುತ್ತದೆ. ಈ ಹೆಚ್ಚುವರಿ ನೀರನ್ನು ರಾಜ್ಯವೇ ಬಳಸಿಕೊಳ್ಳಬೇಕು, ಇದಕ್ಕಾಗಿ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅಥವಾ ತಮಿಳುನಾಡು ಸರ್ಕಾರದ ಅನುಮತಿ ಕೇಳದೆಯೇ 1960 ರಲ್ಲಿ ನಿರ್ಮಾಣ ಮಾಡಿದ ಕಬಿನಿ ಅಣೆಕಟ್ಟಿನಂತೆ ನಿರ್ಮಾಣ ಮಾಡಬೇಕೆಂದು ಒತ್ತಾಯ ಮಾಡಿದರು.
ಬಾಳೆಹಣ್ಣು ಬೆಳೆಗೆ ಸರ್ಕಾರ ಮಾರುಕಟ್ಟೆ ಒದಗಿಸಲಿ
ರಾಜ್ಯದಲ್ಲಿ 34 ಕ್ಕೂ ಹೆಚ್ಚು ವಿಧವಾದ ಬಾಳೆಹಣ್ಣು ಬೆಳೆಯಲಾಗುತ್ತಿದೆ. ಆದರೆ ಮಾರುಕಟ್ಟೆ ಕೊರತೆಯಿಂದ ರೈತರಿಗೆ ತೀವ್ರ ನಷ್ಟವುಂಟಾಗಿದೆ. ಬಾಳೆಹಣ್ಣುಗಳ ಬಗ್ಗೆ ದೆಹಲಿ ಜನರಿಗೆ ಮಾಹಿತಿ ಇಲ್ಲ. ಆದ್ದರಿಂದ ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವದಂದು ಬಾಳೆಹಣ್ಣು ಮೇಳ ನಡೆಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇದರಿಂದ ರಾಜ್ಯದ ರೈತರಿಗೆ ಮಾರುಕಟ್ಟೆ, ಲಾಭ ಸಿಗಲು ಸಹಕಾರಿಯಾಗುತ್ತದೆ ಎಂದರು.
ಗದಗ ಕೊಪ್ಪಳ ಜಿಲ್ಲೆಯಲ್ಲಿ ಜಿಂಕೆ ಕಾಟ
ರೈತಸಂಘದ ಅಧ್ಯಕ್ಷ ನಾರಾಯಣ ರೆಡ್ಡಿ ಮಾತನಾಡಿ, ಕೋವಿಡ್ ಸಮಯದಲ್ಲಿಯೂ ಕೃಷಿ ಚಾಲ್ತಿಯಲ್ಲಿ ಇದ್ದಿದ್ದರಿಂದ ಬೆಳೆಗಳು ಮಾರಾಟವಾಗದೆ ಸಾಕಷ್ಟು ನಷ್ಟವಾಗಿದೆ. ಇಲ್ಲವಾದಲ್ಲಿ ಮಾರುಕಟ್ಟೆಯಾದರೂ ಒದಗಿಸುವ ಕೆಲಸ ಮಾಡಬೇಕು ಎಂದರು. ಗದಗ, ಕೊಪ್ಪಳದಲ್ಲಿ ಜಿಂಕೆ ಕಾಟದಿಂದ ಎಲ್ಲಾ ಬೆಳೆ ಹಾನಿ ಮಾಡುತ್ತಿವೆ. ಜಿಂಕೆ ವನ ನಿರ್ಮಾಣ ಮಾಡಬೇಕಿದೆ. ಫಸಲ್ ಭೀಮಾ ಯೋಜನೆ ಬಂಡಲ್ ಆಗಿದೆ. ಗದಗದಲ್ಲಿ ರೈತರು 580 ಕೋಟಿ ರೂ. ದುಡ್ಡು ಕಟ್ಟಿದ್ರೂ, 80 ಕೋಟಿಯೂ ವಾಪಸ್ ಬಂದಿಲ್ಲ ಎಂದು ದೂರಿದರು.