ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಸಾಲದ ಶೂಲ, ಅತಿವೃಷ್ಟಿ, ಬೆಲೆ ಕುಸಿತದಿಂದ ನೊಂದು ಹಲವು ರೈತರು ನೇಣಿಗೆ ಕೊರಳೊಡ್ಡುತ್ತಿದ್ದಾರೆ. ಕಳೆದ ಮೂರು ವರ್ಷಗಳ ಆತ್ಮಹತ್ಯೆ ಪ್ರಕರಣಗಳ ಸ್ಥಿತಿಗತಿ ನೋಡೋಣ.
ಮೂರು ವರ್ಷಗಳಲ್ಲಿ ನೇಣಿಗೆ ಕೊರಳೊಡ್ಡಿದ ರೈತರೆಷ್ಟು?: 2019-2020 ಸಾಲಿನಲ್ಲಿ ರಾಜ್ಯದಲ್ಲಿ 1091 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಅದೇ 2020-21ರಲ್ಲಿ 851 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ, 2021-22ನೇ ಸಾಲಿನಲ್ಲಿ 859 ಅನ್ನದಾತರು ನೇಣಿಕೆ ಕೊರಳೊಡ್ಡಿದ್ದಾರೆ ಎಂದು ಕೃಷಿ ಇಲಾಖೆ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿದೆ.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 2,801 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ. 2019-20ನೇ ಸಾಲಿನಲ್ಲಿ ವರದಿಯಾದ ಒಟ್ಟು 1091 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಉಪವಿಭಾಗ ಮಟ್ಟದ ಸಮಿತಿ ಸಭೆಯಲ್ಲಿ 196 ಪ್ರಕರಣಗಳು ತಿರಸ್ಕೃತಗೊಂಡಿವೆ. 895 ಪ್ರಕರಣಗಳು ಅರ್ಹ ಪ್ರಕರಣಗಳೆಂದು ತೀರ್ಮಾನಿಸಲಾಗಿದ್ದು, 895 ಅರ್ಹ ಪ್ರಕರಣಗಳಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ತಿಳಿಸಿದೆ.
ಇತ್ತ, 2020-21ರ ಸಾಲಿನಲ್ಲಿ ವರದಿಯಾದ ಒಟ್ಟು 851 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಉಪವಿಭಾಗ ಮಟ್ಟದ ಸಮಿತಿ ಸಭೆಯಲ್ಲಿ 132 ಪ್ರಕರಣಗಳು ತಿರಸ್ಕೃತಗೊಂಡಿವೆ. 716 ಪ್ರಕರಣಗಳು ಅರ್ಹ ಪ್ರಕರಣಗಳೆಂದು ಪರಿಗಣಿಸಲಾಗಿದೆ.
2021-22ನೇ ಸಾಲಿನಲ್ಲಿ ವರದಿಯಾದ ಒಟ್ಟು 859 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಉಪವಿಭಾಗ ಮಟ್ಟದ ಸಮಿತಿ ಸಭೆಯಲ್ಲಿ 112 ಪ್ರಕರಣಗಳು ತಿರಸ್ಕೃತಗೊಂಡಿದ್ದು, 702 ಪ್ರಕರಣಗಳು ಅರ್ಹ ಪ್ರಕರಣಗಳೆಂದು ತೀರ್ಮಾನಿಸಲಾಗಿದೆ. 45 ಪ್ರಕರಣಗಳು ಇನ್ನೂ ತೀರ್ಮಾನಕ್ಕೆ ಬಾಕಿ ಇದೆ.
ಆ ಮೂಲಕ ಕಳೆದ ಮೂರು ವರ್ಷಗಳಲ್ಲಿ ಅರ್ಹ 2,313 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 115.65 ಕೋಟಿ ರೂ ಪರಿಹಾರ ವಿತರಿಸಲಾಗಿದೆ ಎಂದು ಇಲಾಖೆ ಅಂಕಿಅಂಶ ನೀಡಿದೆ.
ಮೂರು ವರ್ಷದಲ್ಲಿ ಗರಿಷ್ಠ ಅನ್ನದಾತರ ಆತ್ಮಹತ್ಯೆ ಎಲ್ಲಿ?: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಬಳಿಕ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದು ಸಿಎಂ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ. ಉಳಿದಂತೆ, ಧಾರವಾಡ ಹಾಗೂ ಮೈಸೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಪ್ರತಿ ವರ್ಷ ಅತಿ ಹೆಚ್ಚು ಅನ್ನದಾತರು ನೇಣಿಗೆ ಶರಣಾಗುತ್ತಿದ್ದಾರೆ. ಜಿಲ್ಲಾವಾರು ಪ್ರಕರಣಗಳನ್ನು ನೋಡುವುದಾದರೆ,
- ಬೆಳಗಾವಿ ಜಿಲ್ಲೆ - 263
- ಹಾವೇರಿ ಜಿಲ್ಲೆ - 232
- ಧಾರವಾಡ ಜಿಲ್ಲೆ - 211
- ಮೈಸೂರು ಜಿಲ್ಲೆ - 208
- ಕಲಬುರಗಿ ಜಿಲ್ಲೆ -190
- ಚಿಕ್ಕಮಗಳೂರು ಜಿಲ್ಲೆ - 175
- ಯಾದಗಿರಿ ಜಿಲ್ಲೆ - 148
- ವಿಜಯಪುರ ಜಿಲ್ಲೆ - 145
ಇದನ್ನೂ ಓದಿ: ಪುಟ್ಟ ಮಕ್ಕಳಿಗೆ ವಿಷವುಣಿಸಿ ತಾನೂ ಸಾವಿಗೆ ಶರಣಾದ ರೈತ ಸಂಘದ ಅಧ್ಯಕ್ಷನ ಪತ್ನಿ