ಬೆಂಗಳೂರು: ಸಂಸದೆ ಸುಮಲತಾ ಅಂಬರೀಶ್ ಅವರು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಭೇಟಿ ನೀಡಿದರು. ಈ ವೇಳೆ ಅಭಿಮಾನಿಗಳು ಘೋಷಣೆ ಕೂಗಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದ ಘಟನೆ ನಡೆದಿದೆ.
ಸಮಾಧಿಯ ದರ್ಶನ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಸಂಸದೆ ಸುಮಲತಾ ಮಾತನಾಡಿ, ನಾನು ಮೊದಲಿನಿಂದಲೂ ಕೆಆರ್ಎಸ್ ಸುತ್ತಮುತ್ತ ಏನು ನಡೆಯುತ್ತಿದೆ ಅನ್ನೋದನ್ನು ಚೆಕ್ ಮಾಡಿ ಎಂದು ಹೇಳಿದ್ದೇನೆ. ಅಕ್ರಮವನ್ನು ನಿಯಂತ್ರಿಸಿ ಎಂದು ಹೇಳುತ್ತಲೇ ಬಂದಿದ್ದೇನೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಅವರ ಕೆಲಸ ಮಾಡುತ್ತಿದ್ದಾರೆ. ಸಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಗಳ ಬಗ್ಗೆ ಮಾಹಿತಿಯಿದೆ. ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಗೆ ಬಗ್ಗೆ ಮಾಹಿತಿ ಡಿಸಿಯವರ ಬಳಿ ಕೇಳಿದ್ದೇನೆ. ಇನ್ನೂ ಲಿಸ್ಟ್ ಮಾಡಿಲ್ಲ, ಕೊಡುತ್ತೇವೆ ಎಂದಿದ್ದಾರೆ ಎಂದರು.
10 ರಿಂದ 15 ಕಿ.ಮೀ ಅಂತರದಲ್ಲಿ ನಡೆಯುವ ಗಣಿಗಾರಿಕೆಯಿಂದ ಯಾವುದೇ ತೊಂದರೆಯಾಗಲ್ಲ ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ಉತ್ತರಿಸಿ ಅವರು, ಡಿ.ಕೆ ಶಿವಕುಮಾರ್ ಅವರ ಮಾತಿಗೆ ರಿಯಾಕ್ಟ್ ಮಾಡೋಕೆ ಇಷ್ಟ ಪಡಲ್ಲ. ಗಣಿಗಾರಿಕೆಯಿಂದ ಏನೂ ಆಗಲ್ಲ ಅಂತ ನಾವು ಮಾತನಾಡೋದು ಅಲ್ಲ. ಅದನ್ನು ತಜ್ಞರು ಹೇಳಿ ಒಂದು ಸರ್ಟಿಫಿಕೇಟ್ ಕೊಡಲಿ ಎಂದು ಹೇಳಿದರು.
ಜಿ.ಟಿ.ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರವರ ಅಭಿಪ್ರಾಯಕ್ಕೆ ನಾನು ರಿಯಾಕ್ಟ್ ಮಾಡುತ್ತಾ ಕೂರೋಕೆ ಸಾಧ್ಯವಿಲ್ಲ. ನನ್ನ ಹೋರಾಟ ಏನು ಅಂತ ನಮಗೆ ಗೊತ್ತಿದೆ. ಅಲ್ಲಿನ ಜನಕ್ಕೆ ರೈತರಿಗೆ ನನ್ನ ಹೋರಾಟದ ಬಗ್ಗೆ ಗೊತ್ತಿದೆ. 11 ಬಾರಿ ಭೂಕಂಪನ ಆಗಿರೋ ಕಡೆ ಏನು ಆಗಲ್ಲ ಅಂತ ಹೇಳೋರು ನಾಳೆ ಏನಾದರೂ ಹೆಚ್ಚುಕಮ್ಮಿ ಆದರೆ ನಾವೇ ಹೊಣೆ ಹೊರುತ್ತೇವೆ ಎನ್ನುವ ಭರವಸೆ ಕೊಡುತ್ತಾರಾ ಎಂದು ಪ್ರಶ್ನಿಸಿದರು.
ರೈತರು ಬೆಂಬಲಕೊಟ್ಟು ಹೋರಾಟಕ್ಕೆ ನಿಂತಿದ್ದಾರೆ. ಆದ್ದರಿಂದ ನಾನು ಕೂಡ ಹೋರಾಟಕ್ಕೆ ಮುಂದಾಗಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲೂ ಇದರ ಬಗ್ಗೆ ಒಂದಷ್ಟು ವಿಡಿಯೋಗಳು ಇವೆ ಅವರು ಕೂಡ ನಮಗೆ ಸಪೋರ್ಟ್ ಮಾಡುತ್ತಿದ್ದಾರೆ.
ಅಕ್ರಮ ಗಣಿಗಾರಿಕೆ ಸ್ಥಳದಲ್ಲಿ ಏನು ನಡೆಯುತ್ತಿದೆ ಎಂದು ಮಾಧ್ಯಮದವರಿಗೆ ಗೊತ್ತಾಗಿದೆ. ಅವರೇ ಒಬ್ಬರಾಗಿ ಹೋಗಿ ಸ್ಟಿಂಗ್ ಆಪರೇಷನ್ ಮೂಲಕ ವರದಿ ಮಾಡುತ್ತಿದ್ದಾರೆ. ಇದು ತುಂಬಾ ಒಳ್ಳೆಯ ಬೆಳವಣಿಗೆ, ಎಲ್ಲರಿಗೂ ಗೊತ್ತಾಗಬೇಕು. ಆ ಸ್ಥಳಗಳಲ್ಲಿ ಏನು ನಡೆಯುತ್ತಿದೆ ಎಂದು ಹೇಳಿದರು.
ನೀವು ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಗಳನ್ನ ಸಪೋರ್ಟ್ ಮಾಡುತ್ತೀರಾ ಎನ್ನುವ ಪ್ರಶ್ನೆಯನ್ನು ಜಿ.ಟಿ.ದೇವೇಗೌಡರನ್ನ ಕೇಳಿ ಆಗ ನನಗೆ ಸ್ವಲ್ಪ ಸಮಾಧಾನವಾಗುತ್ತದೆ ಎಂದು ಸಂಸದೆ ಸುಮಲತಾ ಇಬ್ಬರು ನಾಯಕರಿಗೂ ಟಾಂಗ್ ನೀಡಿದರು.