ಬೆಂಗಳೂರು : ದುಪ್ಪಟ್ಟು ಬೆಲೆಗೆ ನಕಲಿ ಸ್ಯಾನಿಟೈಸರ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿ ಮೊಹಮ್ಮದ್ ಆಯುಬ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಅರ್ಜಿದಾರರ ಪರ ವಕೀಲರು, ಆಯುಬ್ ಓರ್ವ ಸಾಮಾನ್ಯ ಉದ್ಯೋಗಿ ಅಷ್ಟೇ. ಆತನ ಅಂಗಡಿಯ ಮಾಲೀಕ ದೆಹಲಿ ಮೂಲದ ಕಂಪನಿಯಿಂದ ಸ್ಯಾನಿಟೈಸರ್ ಖರೀದಿಸಿದ್ದರು. ಅದನ್ನಷ್ಟೇ ಮಾರಾಟ ಮಾಡಿರುವ ಆಯುಬ್ ನಿಜಕ್ಕೂ ಅಮಾಯಕ. ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ, ಕಳೆದ 50 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಆರೋಪಿ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿದ ಪೀಠ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. 50 ಸಾವಿರ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ, ಕೃತ್ಯದಲ್ಲಿ ಪುನಃ ಭಾಗಿಯಾಗಬಾರದು. ಸಾಕ್ಷ್ಯಾಧಾರ ತಿರುಚಲು ಯತ್ನಿಸಬಾರದು. ತನಿಖಾಧಿಕಾರಿಗಳಿಗೆ ಸಹಕಾರ ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿತು.
ನಗರದ ಸಿಸಿಬಿ ವಿಶೇಷ ತನಿಖಾ ತಂಡ ಕಳೆದ ಏಪ್ರಿಲ್ 4 ರಂದು ಬಿಟಿಎಂ ಮೊದಲನೇ ಹಂತದ ಬಡಾವಣೆಯಲ್ಲಿ ಇರುವ ಟೈಲರ್ ಅಂಗಡಿ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಅಂಗಡಿಯಲ್ಲಿ ವಿವಿಧ ಪ್ರತಿಷ್ಠಿತ ಕಂಪನಿಗಳ ಮುನ್ನೂರಕ್ಕೂ ಅಧಿಕ ಸ್ಯಾನಿಟೈಸರ್ ಬಾಟಲಿಗಳು, ಲೇಬಲ್ಗಳು, ಖಾಲಿ ಬಾಟಲಿಗಳನ್ನು ಜಪ್ತಿ ಮಾಡಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿ, ಮೊಹಮ್ಮದ್ ಆಯುಬ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.