ಬೆಂಗಳೂರು : ನರ್ಸ್ ಸೋಗಿನಲ್ಲಿ ಬಂದಿದ್ದ ಕಳ್ಳಿಯೊಬ್ಬಳು ಆಸ್ಪತ್ರೆಯಲ್ಲಿ ರೋಗಿಗಳ ಮೈಮೇಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಕಳೆದ ಶನಿವಾರ ಆಶೋಕನಗರದ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ನಡೆದಿದೆ. ರಮೇಶ್ ಕುಮಾರ್ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದ 72 ವರ್ಷ ವಯಸ್ಸಿನ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಶನಿವಾರ ಮಧ್ಯಾಹ್ನ ನರ್ಸ್ ವೇಶದಲ್ಲಿ ಆಸ್ಪತ್ರೆಗೆ ಬಂದಿದ್ದ ಮಹಿಳೆ, 'ನಿಮ್ಮ ತಾಯಿಗೆ ಚಿಕಿತ್ಸೆ ನೀಡಬೇಕು, ನೀವು ಹೊರ ಹೋಗಿ' ಎಂದು ರಮೇಶ್ಗೆ ಹೇಳಿದ್ದಾಳೆ. ಹತ್ತು ನಿಮಿಷದ ಬಳಿಕ ಹೊರಬಂದು ನಿಮ್ಮ ತಾಯಿ ಮಲಗಿದ್ದಾರೆ, ತೊಂದರೆ ಕೊಡಬೇಡಿ ಎಂದು ಹೇಳಿ ಆಸ್ಪತ್ರೆಯಿಂದ ತೆರಳಿದ್ದಾಳೆ.
ಸ್ವಲ್ಪ ಸಮಯದ ನಂತರ ಆಸ್ಪತ್ರೆಯ ಅಸಲಿ ನರ್ಸ್ ಬಂದಾಗ, 'ಈಗ ತಾನೇ ಚಿಕಿತ್ಸೆ ನೀಡಿದ್ದೀರಿ. ಮತ್ತೆ ಯಾಕೆ ಬಂದಿದ್ದೀರಾ?' ಎಂದು ರಮೇಶ್ ಪ್ರಶ್ನಿಸಿದ್ದಾರೆ. ನಾನು ಈಗ ತಾನೇ ಬರುತ್ತಿದ್ದೇನೆ ಎಂದು ನರ್ಸ್ ಉತ್ತರಿಸಿದಾಗ ಅನುಮಾನಗೊಂಡ ರಮೇಶ್, ತಾಯಿಯ ಬಳಿ ಬಂದು ಪರಿಶೀಲಿಸಿದಾಗ ಚಿನ್ನದ ಸರ, ಚಿನ್ನದ ಉಂಗುರದ ಬದಲು ನಕಲಿ ಆಭರಣ ಹಾಕಿರುವುದು ಬಯಲಾಗಿದೆ.
ಬಳಿಕ ಕೂಲಂಕಷವಾಗಿ ಪರಿಶೀಲಿಸಿದಾಗ ಆಸ್ಪತ್ರೆಯಲ್ಲಿ ಇದೇ ರೀತಿಯಾಗಿ ಈ ಹಿಂದೆಯೂ ಕೋಮಲಾ ಎಂಬಾಕೆಗೂ ವಂಚಿಸಿರುವುದು ಬಯಲಾಗಿದೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳಲ್ಲಿ ಪರಿಶೀಲಿಸಿದಾಗ ನಕಲಿ ನರ್ಸ್ ಚಲನವಲನ ಪತ್ತೆಯಾಗಿದ್ದು, ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ತವ್ಯ ನಿರತ ನರ್ಸ್ ಬ್ಯಾಗ್ ಕಳವು: ದಾವಣಗೆರೆಯ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಸತ್ಯಬಾಮ ಎಂಬುವರು ತಮ್ಮ ಕೆಲಸದಲ್ಲಿ ತೊಡಗಿರುವ ಸಂದರ್ಭದಲ್ಲಿ ಅವರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿತ್ತು. 80 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ಕಳ್ಳತನವಾಗಿದ್ದವು. ಸತ್ಯಭಾಮ ಹೆರಿಗೆ ವಿಭಾಗದಲ್ಲಿ ರಾತ್ರಿ ವೇಳೆ ಕೆಲಸ ಮಾಡುತ್ತಿದ್ದರು. ಎಂದಿನಂತೆ ತಮ್ಮ ಆಭರಣಗಳನ್ನು ವ್ಯಾನಿಟಿ ಬ್ಯಾಗ್ನಲ್ಲಿ ಇರಿಸಿ ರೂಮ್ ನಂಬರ್ 55 ರಲ್ಲಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದರು. ಕೆಲಸಮಯ ಕರ್ತವ್ಯ ನಿರ್ವಹಿಸಿ ರೂಮ್ ಕಡೆಗೆ ಹಿಂದಿರುಗಿದ್ದಾರೆ. ಬಳಿಕ ರೂಮ್ನಲ್ಲಿ ಇಟ್ಟಿದ್ದ ವ್ಯಾನಿಟ್ ಬ್ಯಾಗ್ ನೋಡಿದಾಗ ಅಲ್ಲಿ ಬ್ಯಾಗ್ ನಾಪತ್ತೆ ಆಗಿದ್ದು ಪ್ರಕರಣ ಬೆಳಕಿಗೆ ಬಂದಿದೆ.
ಬ್ಯಾಗ್ನಲ್ಲಿ 80 ಸಾವಿರ ರೂ ಮೌಲ್ಯದ 30 ಗ್ರಾಂ ತೂಕದ ಚಿನ್ನದ ಬಳೆಗಳು ಹಾಗೂ ಮನೆಯ ಮತ್ತು ಕಾರಿನ ಕೀಯನ್ನು ಕಳ್ಳರು ಕದ್ದುಕೊಂಡು ಪರಾರಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಹುಡುಕಾಡಿ ಮತ್ತು ಸಿಬ್ಬಂದಿಯನ್ನು ವಿಚಾರಿಸಿದರೂ ಕೂಡ ಬ್ಯಾಗ್ ಪತ್ತೆಯಾಗಲಿಲ್ಲ. ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ.
ನಕಲಿ ಸಿಸಿಬಿ ಪೊಲೀಸರಿಂದ ದರೋಡೆ: ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ವ್ಯಾಪಾರಿಯೊಬ್ಬನನ್ನು ಅಡ್ಡಗಟ್ಟಿ ಬಳಿಕ ಹಲ್ಲೆ ಮಾಡಿ 10 ಲಕ್ಷ ರೂ, ಲಪಟಾಯಿಸಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ. ಜನವರಿ 13 ರಂದು ಸಿರ್ಸಿ ವೃತ್ತದ ಬಳಿ ಸಂಜೆ ಸುಮಾರು 7.45 ರ ಹೊತ್ತಿಗೆ ಈ ಘಟನೆ ಜರುಗಿದೆ. ಉತ್ತರ ಭಾರತ ಮೂಲದ ಕಾಟನ್ಪೇಟೆ ನಿವಾಸಿ ಮುಲರಾಮ್ (37) ದರೋಡೆಗೊಳಗಾಗಿದ್ದಾರೆ.
ಇದನ್ನೂ ಓದಿ :ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ಶೂ ವ್ಯಾಪಾರಿಯಿಂದ ₹10 ಲಕ್ಷ ದರೋಡೆ